

ಮಧುಗಿರಿ: ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ಬಸವಣ್ಣನ ಬೆಟ್ಟದ ಬಂಡೆ ಮೇಲೆ (ಆನಂದರಾಯನ ಗುಡ್ಡ) ಒಂದು ವಾರದಿಂದ ನಿರಂತರವಾಗಿ 3 ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿದೆ.
ತುಮಕೂರು ಜಿಲ್ಲೆ ಮಧುಗಿರಿಯ ಬಸವಣ್ಣನ ಬೆಟ್ಟದಲ್ಲಿ ಕಳೆದ ಬುಧವಾರ 2 ಚಿರತೆಗಳು ಕಾಣಿಸಿಕೊಂಡಿದ್ದವು. ಇವುಗಳ ಜತೆ ಮತ್ತೊಂದು ಚಿರತೆ ಸೇರಿಕೊಂಡಿದ್ದು, ಈ ಮೂರೂ ಚಿರತೆಗಳು ಒಟ್ಟಾಗಿ ಬಂಡೆ ಮೇಲೆ ವಿರಮಿಸುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಬೆಟ್ಟದ ಸಮೀಪದಲ್ಲೇ ವಸತಿ ಪ್ರದೇಶ, ವಿದ್ಯಾರ್ಥಿನಿಲಯ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಇದೆ. ಚಿರತೆಗಳನ್ನು ಕಂಡ ಜನರು ಮಧುಗಿರಿ ಪಟ್ಟಣದಲ್ಲಿ ರಾತ್ರಿ ವೇಳೆ ಮಾತ್ರವಲ್ಲ, ಹಗಲಲ್ಲಿ ಓಡಾಡಲೂ ಭಯಭೀತರಾಗಿದ್ದಾರೆ. ಬಂಡೆಗಳ ನಡುವಿನ ಪೊದೆಯಲ್ಲಿ ನಾಲ್ಕು ದಿನಗಳಿಂದ ವಾಸವಿರುವ ಚಿರತೆಗಳು ಯಾರ ಮೇಲೆ ದಾಳಿ ಮಾಡುತ್ತವೆಯೋ ಎಂಬ ಆತಂಕ ಸ್ಥಳೀಯರಲ್ಲಿ ಸಹಜವಾಗಿದೆ.
ಇಲ್ಲಿಗೆ ಬಂದದ್ದಾದರೂ ಹೇಗೆ?: ಮಧುಗಿರಿ ಪಟ್ಟಣದ ಸಮೀಪವೇ ಇರುವ ಕಾರಮರಡಿ ಗುಡ್ಡದಲ್ಲಿ ಸುಮಾರು ವರ್ಷಗಳಿಂದ ಚಿರತೆಗಳು ಇವೆ, ಆದರೆ ಇತ್ತೀಚೆಗೆ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. 2 ವರ್ಷದಿಂದ ಕಾರಮರಡಿ ಗುಡ್ಡ ಮತ್ತು ಪಾವಗಡ ರಸ್ತೆಯಲ್ಲಿರುವ ಪ್ರವಾಸಿ ಮಂದಿರದ ಸಮೀಪದ ಗುಡ್ಡದಲ್ಲಿ ಹಾಸ್ಟೆಲ್ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿಯ ಶಬ್ದಕ್ಕೆ ಬೆದರಿ ಚಿರತೆಗಳು ಜಾಗ ಬದಲಿಸಿ ಆನಂದರಾಯನ ಗುಡ್ಡ ಸೇರಿಕೊಂಡಿರಬಹುದು ಎನ್ನಲಾಗುತ್ತಿದೆ. ಆನಂದರಾಯನ ಗುಡ್ಡದ ಹಿಂಭಾಗದ ಪ್ರದೇಶ ಬೆಟ್ಟಗುಡ್ಡಗಳಿಂದ ಕೂಡಿದೆ. ಇಲ್ಲಿಯವರೆಗೂ ಯಾವುದೇ ದಾಳಿ ನಡೆಸಿಲ್ಲವಾದರೂ ಬೆಳಗಿನ ಜಾವ ತುಮಕೂರು ರಸ್ತೆಯ ದಂಡಿನ ಮಾರಮ್ಮನ ದೇವಸ್ಥಾನ ಮತ್ತು ಬೈಪಾಸ್ ರಸ್ತೆಯ ಕಡೆ ವಿಹಾರಕ್ಕೆ ತೆರಳುವವರು ಎಚ್ಚರಿಕೆಯಿಂದ ಓಡಾಡಬೇಕಿದೆ.
ಪ್ರತಿದಿನ ಸಂಜೆ ಆನಂದರಾಯನ ಬೆಟ್ಟದ ತುದಿಯಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿವೆ. ಮಕ್ಕಳನ್ನು ಆಟವಾಡಲು ಮನೆಯಿಂದ ಹೊರಗಡೆ ಕಳುಹಿಸುವುದಕ್ಕೂ ಭಯವಾಗುತ್ತದೆ. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಗಳನ್ನು ದೊಡ್ಡ ಅರಣ್ಯಕ್ಕೆ ಬಿಡಬೇಕಿದೆ.
|ಎಂ.ಪಿ. ರವೀಶ್ ಸ್ಥಳೀಯರು
ಚಿರತೆಗಳು ಗುಡ್ಡಗಳಲ್ಲಿ ಇರುವುದು ಸಾಮಾನ್ಯ. ಮೂರರಿಂದ ನಾಲ್ಕು ದಿನ ಇಲ್ಲಿದ್ದು, ಅವು ಬೇರೆ ಪ್ರದೇಶಕ್ಕೆ ಹೋಗುತ್ತವೆ. ಬೆಟ್ಟದಲ್ಲಿ ಪಟಾಕಿ ಸಿಡಿಸಿ, ಬೋನುಗಳನ್ನು ಇಡಲಾಗಿದೆ. ಸಾರ್ವಜನಿಕರು ಚಿರತೆ ಕಂಡಲ್ಲಿ ಯಾವುದೇ ರೀತಿ ತೊಂದರೆ ನೀಡಬಾರದು. ವಾರದ ಮಟ್ಟಿಗೆ ಯಾರೂ ಬೆಟ್ಟದ ಮೇಲೆ ಹೋಗಬಾರದು.
|ಮುತ್ತುರಾಜು ಉಪವಲಯ ಅರಣ್ಯ ಅಧಿಕಾರಿ