

ಮೇಲುಕೋಟೆ: ನೆಲದ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಲು ಶಾಲಾ ಶಿಕ್ಷಣದ ಪಠ್ಯಕ್ರಮದಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕಿದೆ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯಪಟ್ಟರು.
ಮೇಲುಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಸಂಸ್ಕೃತಿ ಸಂಗಮ ನೆಲ ಸಂಸ್ಕೃತಿ ನಾಟಕೋತ್ಸವ-2024ರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳಿಗೆ ನೆಲದ ಸಂಸ್ಕೃತಿಯ ಪರಿಚಯ ಮಾಡಿ ಅವರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವಂತಹ ಶಿಕ್ಷಣ ನೀಡಬೇಕಾದ ಅಗತ್ಯವಿದೆ. ಶಿಕ್ಷಣ ಕ್ಷೇತ್ರ ಇಂದು ಸ್ವಾಮೀಜಿಗಳ, ರಾಜಕಾರಣಿಗಳ, ಉದ್ಯಮಿಗಳ ಹಿಡಿತದಲ್ಲಿದ್ದು, ದುಭಾರಿಯಾಗುತ್ತಿದೆ. ಬಡಮಕ್ಕಳಿಗೆ ಉನ್ನತ ಶಿಕ್ಷಣ ಕೈಗೆಟಕದಂತಾಗಿದೆ . ಆದ್ದರಿಂದ ಇಡೀ ಶಿಕ್ಷಣ ಕ್ಷೇತ್ರದ ವ್ಯವಸ್ಥೆ ಬದಲಾಗಬೇಕಿದೆ. ಹಣವಿಲ್ಲದವರಿಗೂ ಕಾನ್ವೆಂಟ್‌ಗಳಲ್ಲಿ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತವಾಗಿ ಶಿಕ್ಷಣ ದೊರೆಯಬೇಕಿದೆ ಎಂದರು.
ಪ್ರಸ್ತುತ ಪಾಲಕರು ಕಾನ್ವೆಂಟ್ ಶಿಕ್ಷಣಕ್ಕೆ ಮಾರುಹೋಗಿ ಶಿಕ್ಷಣಕ್ಕಾಗಿ ದುಬಾರಿ ಹಣ ಖರ್ಚು ಮಾಡುತ್ತಿದ್ದಾರೆ. ಕಾನ್ವೆಂಟ್‌ಗಳಿಗಿಂತ ಸರ್ಕಾರಿ ಶಾಲೆಗಳಲ್ಲಿಯೇ ಉತ್ತಮವಾದ ಶಿಕ್ಷಣ ದೊರೆಯುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಿಗಿಂತಲೂ ಉತ್ತಮವಾದ ಶಿಕ್ಷಕರಿದ್ದಾರೆ. ಕಲಿಕಾ ಪರಿಸರವೂ ಉತ್ತಮವಾಗಿದೆ. ಪಾಲಕರು ಖಾಸಗಿ ಕಾನ್ವೆಂಟ್ ವ್ಯಾಹೋಹ ತೊರೆಯಬೇಕು. ಸರ್ಕಾರಿ ಶಾಲೆಗಳಲ್ಲೇ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಕಲಿತವರು ಸಮಾಜಕ್ಕೆ ಕೊಡುಗೆ ನೀಡುವ ಪ್ರಜೆಯಾಗಿ ರೂಪುಗೊಳ್ಳುತ್ತಿದ್ದಾರೆ ಎಂಬುದನ್ನು ಪಾಲಕರು ಮನಗಾಣಬೇಕು ಎಂದರು.
ಮಕ್ಕಳಿಂದಲೇ ಹತ್ತು ನಾಟಕಗಳ ಪ್ರದರ್ಶನ: ನೆಲ ಸಂಸ್ಕೃತಿಯ ನಾಟಕೋತ್ಸವ ಶಿಬಿರ ಮಂಡ್ಯ ಜಿಲ್ಲೆಯಲ್ಲಿ ಪ್ರಥಮ ಪ್ರಯತ್ನವಾಗಿದ್ದು, ಮೇಲುಕೋಟೆಯ ಸರ್ಕಾರಿ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶಾಸಕರ ಸಹಕಾರದಲ್ಲಿ ನಾಟಕೋತ್ಸವ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ಮಕ್ಕಳಿಂದಲೇ ಇಲ್ಲಿನ ಮಣ್ಣಿನ ವಿಚಾರಗಳನ್ನು ಸಂಗ್ರಹಿಸಿ ಇದಕ್ಕೆ ಪೂರಕವಾದ ನಾಟಕಗಳನ್ನು ತಯಾರಿಸಿ ಮಕ್ಕಳಿಗೇ ಕಲಿಸಿ ಅವರಿಂದಲೇ ಪ್ರದರ್ಶನ ಮಾಡಿಸಲಾಗುತ್ತದೆ. ಶಿಬಿರದಲ್ಲಿ ಕಲಿತ ಮಕ್ಕಳಿಂದ ಮೇಲುಕೋಟೆಯಲ್ಲಿ ನಾಲ್ಕು ಹಾಗೂ ವಿವಿಧ ತಾಲೂಕು ಕೇಂದ್ರದಲ್ಲಿ ಒಂದೊಂದು ನಾಟಕಗಳನ್ನು ಪ್ರದರ್ಶಿಸಲು ಯೋಜಿಸಲಾಗಿದೆ ಎಂದರು.
ಮಂಡ್ಯ ಜಿಲ್ಲಾ ಯೂನಿಯನ್ ಬ್ಯಾಂಕ್ ಅಧ್ಯಕ್ಷ ಕಾಡೇನಹಳ್ಳಿ ರಾಮಚಂದ್ರು ಮಾತನಾಡಿ, ಶಾಲಾಮಕ್ಕಳು ರಂಗಕಲೆಯಲ್ಲಿ ಪ್ರಾಥಮಿಕ ಹಂತದಿಂದಲೇ ತೊಡಗಿಸಿಕೊಳ್ಳುವಂತಹ ಪೂರಕ ವಾತಾವರಣ ದೊರೆಯಬೇಕು. ಅದಕ್ಕಾಗಿ ಪಾಲಕರು ಮತ್ತು ಶಿಕ್ಷಕರು ವೇದಿಕೆ ಕಲ್ಪಿಸಿಕೊಡಬೇಕು. ಮಕ್ಕಳು ಕಲಿತು ಪ್ರದರ್ಶಿಸುವ ನಾಟಕಗಳಿಗೆ ನನ್ನ ಸಂಪೂರ್ಣಬೆಂಬಲವಿದೆ ಎಂದರು.
ಪಾಂಡವಪುರ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ಮಾತನಾಡಿ, ನಾಟಕಗಳೂ ಪಠ್ಯದ ಭಾಗಗಳಾಗಿವೆ. ನಮ್ಮ ಸಂಸ್ಕೃತಿಯ ಪರಿಚಯವನ್ನು ಮಕ್ಕಳಿಗೆ ಮಾಡಿಸುವ ಜವಾಬ್ದಾರಿ ನಮ್ಮಮೇಲಿದ್ದು ಮಕ್ಕಳನ್ನು ರಂಗಕಲೆಯಲ್ಲಿ ತೊಡಗಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ 30 ದಿನಗಳ ಕಾಲ ಸಮಾಜದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಿರಿಯರಿಗೆ ಗದ್ದಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವಿದ್ದು, ಕರ್ನಾಟಕ ರಾಜ್ಯ ರೈತಸಂಘದ ಕಾರ್ಯಾಧ್ಯಕ್ಷ ವೀರಸಂಗಯ್ಯ ಅವರಿಗೆ ಪ್ರಥಮ ಗದ್ದಿಗೆ ಗೌರವ ಸಲ್ಲಿಸಲಾಯಿತು.
ಸಿಪಿಎಂ ರಾಜ್ಯ ಕಾರ್ಯದರ್ಶಿ ಜಿ.ಎನ್.ನಾಗರಾಜು, ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ಪಿ.ನಾಗರಾಜು, ಕ್ಷೇತ್ರಶಿಕ್ಷಣಾಧಿಕಾರಿ ಚಂದ್ರಶೇಖರ್, ಶಿಕ್ಷಣ ಸಂಯೋಜಕ ರಮೇಶ್ ಕನಗೋನಹಳ್ಳಿ, ಪರಿಸರ ತಜ್ಞ ಸಂತೋಷ್ ಕೌಲಗಿ, ಕಸಾಪ ಮಾಜಿ ಅಧ್ಯಕ್ಷ ವೆಂಕಟರಾಮೇಗೌಡ, ಸಾಹಿತಿ ಸಿ.ಎನ್.ನಾಗರಾಜು, ಹೋರಾಟಗಾರ್ತಿ ಕುಮಾರಿ, ದೃಶ್ಯ ಟ್ರಸ್ಟ್ ಅಧ್ಯಕ್ಷ ಕೆ.ಆರ್. ಗಿರೀಶ್, ಮುಖ್ಯಶಿಕ್ಷಕ ಸಂತಾನರಾಮನ್, ಶಿಕ್ಷಕಿ ಮಹಾಲಕ್ಷ್ಮೀ, ಬಿ.ಜಯಂತಿ, ಮಹಮದ್, ಇಮ್ರಾನ್, ಪೂರ್ಣಿಮಾ ಮತ್ತಿತರರು ಭಾಗವಹಿಸಿದ್ದರು.