

ಬೆಂಗಳೂರು: ಗೌರಿ-ಗಣೇಶ ಹಬ್ಬದ ಪ್ರಯುಕ್ತ ಚಾಮರಾಜಪೇಟೆ ಆಟದ ಮೈದಾನ ಸಮೀಪ ಪ್ರತಿಷ್ಠಾಪಿದ್ದ ಗಣೇಶ ಮೂರ್ತಿಯನ್ನು ನಿಮಜ್ಜನ ಮಾಡುವ ಹಿನ್ನೆಲೆ ಶನಿವಾರ ಮಧ್ಯಾಹ್ನ ಪ್ರಮುಖ ರಸ್ತೆಗಳಲ್ಲಿ ಅದ್ದೂರಿ ಮೆರವಣಿಗೆ ಮೂಲಕ ಕರೆದೊಯ್ಯಲಾಗುತ್ತಿದೆ.
ಮೆರವಣಿಗೆ ವೇಳೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಿಲಾಗಿದ್ದು, ಗಣೇಶ ಮೂರ್ತಿಗಳ ಮೆರವಣಿಗೆಯಲ್ಲಿ ಸಾವರ್ಕರ್ ಹಾಗೂ ಮೃತ ಹಿಂದೂ ಕಾರ್ಯಕರ್ತರ ಫೋಟೋಗಳನ್ನೂ ಹಿಡಿದು ಘೋಷಣೆ ಕೂಗಲಾಯಿತು. ಭಟ್ಕಳದ ಪ್ರವೀಣ್ ನೆಟ್ಟಾರು, ಶಿವಮೊಗ್ಗದ ಹರ್ಷ, ಶಿವಾಜಿನಗರದಲ್ಲಿ ಹತ್ಯೆಯಾಗಿದ್ದ ಆರ್ಎಸ್ಎಸ್ ಕಾರ್ಯಕರ್ತ ರದ್ರೇಶ್ರ ಫೋಟೋಗಳನ್ನೂ ಹಿಡಿದು ಜನ ಮೆರವಣಿಗೆಯಲ್ಲಿ ಸಾಗಿದ ದೃಶ್ಯ ಕಂಡು ಬಂತು.
ಚಾಮರಾಜಪೇಟೆಯಿಂದ ಮಧ್ಯಾಹ್ನ 2.30ಕ್ಕೆ ಹೊರಟ ಗಣೇಶ ಮೆರವಣಿಗೆ ಶಿರಸಿ ಸರ್ಕಲ್ ತಲುಪಿತು. ಇಲ್ಲಿಂದ ಸಿಟಿ ಮಾರ್ಕೆಟ್ ಮಾರ್ಗವಾಗಿ ಟೌನ್ ಹಾಲ್ನತ್ತ ಹೊರಟಿದೆ. ಚಾಮರಾಜಪೇಟೆ, ಬಿನ್ನಿಪೇಟೆ ಸೇರಿದಂತೆ ನಗರದ ಬೇರೆ ಬೇರೆ ಭಾಗಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳನ್ನೂ ಮೆರವಣಿಗೆಯಲ್ಲು ಕೊಂಡೊಯ್ಯಲಾಗುತ್ತಿದೆ. ತಮಟೆ, ಡಿಜೆ ಸೌಂಡ್ಗೆ ತಕ್ಕಂತೆ ಮೆರವಣಿಗೆಯುದ್ದಕ್ಕೂ ಭಕ್ತರು ಡಾನ್ಸ್ ಮಾಡುತ್ತಾ ಗಣೇಶೋತ್ಸವಕ್ಕೆ ಮೆರುಗು ತಂದಿದ್ದಾರೆ.