ಜಿಲ್ಲಾದ್ಯಂತ ಸಂಭ್ರಮದ ವಿಜಯದಶಮಿ

26-hvr-04
Published on

ಹಾವೇರಿ: ಕರೊನಾ ಹಾಗೂ ಅತಿವೃಷ್ಟಿಯ ಸಂಕಷ್ಟದ ನಡುವೆಯೂ ಜಿಲ್ಲೆಯಾದ್ಯಂತ ಭಾನುವಾರ, ಸೋಮವಾರ ಎರಡು ದಿನಗಳ ಕಾಲ ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

11 ದಿನಗಳ ಕಾಲ ದುರ್ಗಾದೇವಿ, ಗ್ರಾಮದೇವತೆಯ ದೇವಸ್ಥಾನಗಳಲ್ಲಿ ಪುರಾಣ ಪ್ರವಚನ, ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಗ್ರಾಮೀಣ ಭಾಗದಲ್ಲಿ ಗ್ರಾಮದೇವತೆಯ ಭಾವಚಿತ್ರದ ಮೆರವಣಿಗೆ, ಕುಂಭ ಮೆರವಣಿಗೆ, ಭಜನೆ ಹಾಗೂ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ನಡೆದವು.

ಭಾನುವಾರ ಆಯುಧ ಪೂಜೆ ಅಂಗವಾಗಿ ವಾಹನಗಳ ಪೂಜೆ, ಅಂಗಡಿಗಳಲ್ಲಿ ದೇವತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಹಬ್ಬ ಶುಭ ಸೂಚಕವಾಗಿದ್ದರಿಂದ ಹೊಸ ವಾಹನ ಖರೀದಿ, ನೂತನ ಅಂಗಡಿ ಪ್ರಾರಂಭೋತ್ಸವ, ನಿವೇಶನ ಖರೀದಿಯೂ ಕಂಡುಬಂತು.

ಬನ್ನಿ ಮುಡಿಯುವ ಹಬ್ಬ: ವಿಜಯದಶಮಿ ಹಬ್ಬದ ಅಂಗವಾಗಿ ಅಮವಾಸ್ಯೆ ಪಾಡ್ಯದಿಂದ ಬನ್ನಿಗಿಡದ ಪೂಜೆ ಆರಂಭಿಸಿದ್ದ ಮಹಿಳೆಯರು ಸೋಮವಾರ ನಸುಕಿನ ವೇಳೆಯಲ್ಲಿ ಬನ್ನಿಗಿಡಕ್ಕೆ ಹಸಿರುಸೀರೆ ಉಡಿಸಿ ವಿಶೇಷ ಪೂಜೆ ಸಲ್ಲಿಸಿ ಮುತೆôದೆಯರಿಗೆ ಉಡಿ ತುಂಬಿದರು. ಸಂಜೆ ಬನ್ನಿಗಿಡದ ಎಲೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಮೂಲಕ ಎಲ್ಲ ಸಮಾಜದ ಬಾಂಧವರು ‘ಬನ್ನಿ ತಗೊಂಡು ನಾವು-ನೀವು ಬಂಗಾರದಂಗ ಇರೋಣ’ ಎಂದು ಶುಭ ಕೋರಿದರು. ಬನ್ನಿ ಮುಡಿಯುವ ಕಾರ್ಯಕ್ರಮ ರಾತ್ರಿಯಾಗುತ್ತಿದ್ದಂತೆಯೇ ಜೋರಾಯಿತು. ಮೊದಲು ದೇವರಿಗೆ ಬನ್ನಿ ಮುಡಿಸಿ ನಂತರ ಸ್ನೇಹಿತರು, ಬಂಧುಬಾಂಧವರಿಗೆ ನೀಡಿ ವಿಜಯದಶಮಿಯ ಶುಭಾಶಯ ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net