ಅಪ್ರಾಪ್ತರಿಗೆ ವಾಹನ ನೀಡಿದರೆ ಕೇಸು ದಾಖಲು

Published on

ಪಾಲಕರಿಗೆ ಸರ್ಕಲ್ ಇನ್‌ಸ್ಪೆಕ್ಟರ್ ಪ್ರಶಾಂತ್ ವರ್ಣಿ ಎಚ್ಚರಿಕೆ

ವಿಜಯವಾಣಿ ಸುದ್ದಿಜಾಲ ಬಾಗೇಪಲ್ಲಿ

ಅಪ್ರಾಪ್ತರಿಗೆ ದ್ವಿಚಕ್ರ ವಾಹನ ನೀಡುವ, ಅಪಘಾತ ಕೃತ್ಯಕ್ಕೆ ಕಾರಣರಾಗುವ ವಾಹನ ಮಾಲೀಕರ, ಪಾಲಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಪ್ರಶಾಂತ್ ವರ್ಣಿ ಎಚ್ಚರಿಕೆ ನೀಡಿದರು.

ಬಾಗೇಪಲ್ಲಿ ವ್ಯಾಪ್ತಿಯ ಶಾಲಾ, ಕಾಲೇಜುಗಳಿಗೆ ಸಿಬ್ಬಂದಿಯೊಂದಿಗೆ ಭೇಟಿ ನೀಡಿ, ಅಪ್ರಾಪ್ತರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡು, ಮಾತನಾಡಿದ ಅವರು, ಇತ್ತೀಚೆಗೆ ನಡೆದ ರಸ್ತೆ ಅಪಘಾತಗಳಲ್ಲಿ ಅಪ್ರಾಪ್ತ ವಾಹನ ಚಾಲಕರೇ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಡುತ್ತಿದ್ದಾರೆ. ವಾಹನ ಕಾಯ್ದೆಯಂತೆ 18 ವರ್ಷ ವಯಸ್ಸಿನೊಳಗಿನವರು ವಾಹನ ಚಲಾಯಿಸುವುದು ಹಾಗೂ ಅಪ್ರಾಪ್ತರಿಗೆ ವಾಹನ ನೀಡುವುದು ಅಪರಾಧ. ಅಪ್ರಾಪ್ತರು ಅಡ್ಡಾದಿಡ್ಡಿ ವಾಹನ ಚಲಾಯಿಸುವುದರಿಂದ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಶಾಲಾ, ಕಾಲೇಜುಗಳಿಗೆ ತೆರಳುವ ಮಕ್ಕಳಿಗೆ ಪಾಲಕರು ಯಾವುದೇ ಕಾರಣಕ್ಕೂ ಪರವಾನಗಿ ಇಲ್ಲದೆ ದ್ವಿಚಕ್ರ ವಾಹನ, ಕಾರು ಕೊಡಿಸಬಾರದು. ನಿಯಮ ಉಲ್ಲಂಸಿ ಅಪ್ರಾಪ್ತರಿಗೆ ವಾವನ ಕೊಟ್ಟರೆ ಪಾಲಕರು ಹಾಗೂ ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

38 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದ ಪೊಲೀಸರು, ಬಳಿಕ ವಿದ್ಯಾರ್ಥಿಗಳ ಪಾಲಕರಿಂದ ಮುಚ್ಚಳಿಕೆ ಬರೆಯಿಸಿಕೊಂಡು, ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದರು.

ಸಬ್‌ಇನ್‌ಸ್ಪೆಕ್ಟರ್‌ಗಳಾದ ಸುನೀಲ್ ಕುಮಾರ್, ಪಿ.ನಾಗಮ್ಮ, ಎಎಸ್‌ಐ ಹನುಮಂತಪ್ಪ, ಪೊಲೀಸ್ ಪೇದೆಗಳಾದ ಶ್ರೀಪತಿ, ರಮೇಶ್, ಹರೀಶ್, ಅನಿಲ್, ಕಿರಣ್ ನಾಯಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net