

ತಿ.ನರಸೀಪುರ: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮುಖಂಡ ತೋಟದಪ್ಪ ಬಸವರಾಜು ಶುಕ್ರವಾರ ತಿ.ನರಸೀಪುರ ಠಾಣೆಗೆ ದೂರು ನೀಡಿದ್ದಾರೆ.
ಕೊಡಗಿನಲ್ಲಿ ಮಾಧ್ಯಮದವರ ಜತೆ ಮಾತನಾಡುವ ಭರದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಿಗೆ ಬೆದರಿಕೆ ಒಡ್ಡಿದ್ದಾರೆ. ನಮ್ಮ ಕಾರ್ಯಕರ್ತರನ್ನು ಬೀದಿಗಿಳಿಸಿದರೆ ಮುಖ್ಯಮಂತ್ರಿ ಕೂಡ ಓಡಾಡದಂತೆ ಆಗುತ್ತದೆ ಎಂದು ಹೇಳಿದ್ದಾರೆ. ಹಾಗಾಗಿ ಅವರನ್ನು ಬಂಧಿಸಬೇಕು ಎಂದು ತೋಟದಪ್ಪ ಬಸವರಾಜು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಸಿದ್ದರಾಮಯ್ಯ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಧರ್ಮವಾರು ಜನರನ್ನು ಎತ್ತಿಕಟ್ಟುವ ಕೆಲಸ ಮಾಡಿ ಅಧಿಕಾರ ಹಿಡಿಯಲು ಹವಣಿಸುತ್ತಿದ್ದಾರೆ. ಹಾಗಾಗಿ ಸಮಾಜದ ಹಿತವನ್ನು ಕದಡುವ ಹೇಳಿಕೆಗಳನ್ನು ಕಾಂಗ್ರೆಸ್ ನಾಯಕರು ನೀಡುತ್ತಿದ್ದಾರೆ ಎಂದು ಮಾಧ್ಯಮಗಳೊಂದಿಗೆ ಮಾತನಾಡುತ್ತ ದೂರಿದರು.
ಮಳೆ ಹಾನಿಪೀಡಿತ ಪ್ರದೇಶಗಳ ವೀಕ್ಷಣೆಗೆಂದು ನಿನ್ನೆ(ಗುರುವಾರ) ಕೊಡಗು ಜಿಲ್ಲೆಗೆ ಪ್ರವಾಸ ಹೋದ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಮಡಿಕೇರಿಯಲ್ಲಿ ಜನರಲ್ ತಿಮ್ಮಯ್ಯ ಸರ್ಕಲ್ ಬಳಿ ಸಿದ್ದು ಕಾರಿನತ್ತ ಮೊಟ್ಟೆ ಎಸೆದು ‘go back’ ಎಂದು ಆಕ್ರೋಶ ಹೊರಹಾಕಿದ್ದರು. ಸಿದ್ದರಾಮಯ್ಯ ಟಿಪ್ಪು ಶಿಷ್ಯ ಎಂದು ಘೋಷಣೆ ಕೂಗಿದ್ದರು. ಈ ಕುರಿತು ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದರು.