ರೈಲ್ವೆ ಪೊಲೀಸರಿಗೆ ಶೋಲ್ಡರ್ ಲೈಟ್: ರಾಜ್ಯದಲ್ಲಿ ಪ್ರಥಮ ಬಾರಿಗೆ ಜಾರಿ

railway police
Published on

ಬೆಂಗಳೂರು: ರಾತ್ರಿ ವೇಳೆ ರೈಲು ಗಸ್ತು, ರೈಲು ಹಳಿ ಗಸ್ತು ಹಾಗೂ ಅಪರಾಧಗಳ ಘಟನಾ ಸ್ಥಳಗಳಲ್ಲಿ ರೈಲ್ವೆ ಪೊಲೀಸರ ಇರುವಿಕೆ ಗುರುತಿಸಲು ಅನುವಾಗುವಂತೆ ರಾಜ್ಯದಲ್ಲಿ ಪ್ರಥಮ ಬಾರಿಗೆ ರೈಲ್ವೆ ಪೊಲೀಸರಿಗೆ ‘ಶೋಲ್ಡರ್ ಲೈಟ್’ ಪರಿಚಯಿಸಲಾಗಿದೆ.

ರಾತ್ರಿ ವೇಳೆ ರೈಲ್ವೆ ಪೊಲೀಸರು ರೈಲು ಗಸ್ತು, ರೈಲು ಹಳಿಗಳ ಗಸ್ತು ಮಾಡುತ್ತಾರೆ. ನಿಗದಿತ ಮಾರ್ಗದಲ್ಲಿ ರೈಲು ಹಳಿಗಳ ಮೇಲೆ ನಡೆದು ಹೋಗುವ ಸಂದರ್ಭದಲ್ಲಿ ಕತ್ತಲೆ ಇರುತ್ತದೆ. ಕೆಲವು ಬಾರಿ ರೈಲ್ವೆ ಹಳಿಗಳ ಮೇಲೆ ಆತ್ಮಹತ್ಯೆ ಘಟನೆಗಳು ನಡೆದ ಸಂದರ್ಭದಲ್ಲಿ ರೈಲ್ವೆ ಪೊಲೀಸರು ಸ್ಥಳಕ್ಕೆ ತೆರಳುತ್ತಾರೆ. ಇಂತಹ ಸಂದರ್ಭದಲ್ಲಿ ಸ್ಥಳದಲ್ಲಿ ಇರುವಿಕೆ ಗುರುತಿಸುವುದು ಕಷ್ಟವಾಗುತ್ತದೆ. ಹೀಗಾಗಿ ರಾತ್ರಿ ವೇಳೆ ರೈಲ್ವೆ ಪೊಲೀಸರ ಇರುವಿಕೆಯನ್ನು ಗುರುತಿಸಲು ಅನುವಾಗುವಂತೆ ಶೋಲ್ಡರ್ ಲೈಟ್ ಪರಿಚಯಿಸಲಾಗಿದೆ ಎಂದು ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ಸಿರಿಗೌರಿ ತಿಳಿಸಿದರು.

ರಾತ್ರಿ ವೇಳೆ ರೈಲು ಗಸ್ತು, ರೈಲುಗಳ ಹಳಿಗಳ ಗಸ್ತು ಕರ್ತವ್ಯಕ್ಕೆ ನಿಯೋಜನೆಯಾಗುವ ರೈಲ್ವೆ ಪೊಲೀಸ್ ಸಿಬ್ಬಂದಿ ತಮ್ಮ ಭುಜದ ಮೇಲೆ ಈ ಶೋಲ್ಡರ್ ಲೈಟ್ ಧರಿಸುತ್ತಾರೆ. ಸದ್ಯಕ್ಕೆ 200 ಶೋಲ್ಡರ್ ಲೈಟ್ ಖರೀದಿಸಿದ್ದು, ಸದ್ಯ ಪ್ರತಿ ರೈಲ್ವೆ ಪೊಲೀಸ್ ಠಾಣೆಗೆ ತಲಾ 12 ಶೋಲ್ಡರ್ ಲೈಟ್ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಶೋಲ್ಡರ್ ಲೈಟ್ ಖರೀದಿಸಿ ರೈಲ್ವೆ ಪೊಲೀಸರಿಗೆ ವಿತರಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net