ಯುವತಿ ಮೇಲೆ ಚಾಮರಾಜಪೇಟೆ ಪಿಎಸ್​ಐ ಅತ್ಯಾಚಾರ ಕೇಸ್​: ಸಿಐಡಿ ತನಿಖೆ ಆರಂಭ

vishwanath-biradar
Published on

ಬೆಳ್ತಂಗಡಿ(ದಕ್ಷಿಣ ಕನ್ನಡ): ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆ ಪಿಎಸ್ಐ ವಿಶ್ವನಾಥ್​ ವಿರುದ್ಧದ ಅತ್ಯಾಚಾರ ‌ಆರೋಪ‌ ಪ್ರಕರಣ ಹೈಕೋರ್ಟ್​​ ಆದೇಶದನ್ವಯ ಸಿಐಡಿಗೆ ಹಸ್ತಾಂತರಗೊಂಡಿದ್ದು, ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆಗೆ 2020ರ ಆಗಸ್ಟ್ ತಿಂಗಳಲ್ಲಿ ಲ್ಯಾಪ್‌ಟಾಪ್ ಕಳವಾದ ಬಗ್ಗೆ ದೂರು ನೀಡಲು ತೆರಳಿದ್ದಾಗ ಪಿಐಎಸ್ ವಿಶ್ವನಾಥ್ ಬಿರಾದಾರ್ ಪರಿಚಯವಾಗಿದ್ದರು. ದಿನ ಕಳೆದಂತೆ ಸಲುಗೆ ಬೆಳೆದು ಮದುವೆಯ ಪ್ರಸ್ತಾವನೆ ಇಟ್ಟರು. ಕಳೆದ ವರ್ಷ ನ. 10ರಂದು ಮದುವೆಯ ನೆಪದಲ್ಲಿ ಧರ್ಮಸ್ಥಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಹೋಟೆಲ್‌ನಲ್ಲಿ ರೂಮ್ ಪಡೆದು ಇಚ್ಛೆಗೆ ವಿರುದ್ಧವಾಗಿ ದೈಹಿಕ ಸಂಪರ್ಕ ನಡೆಸಿದ್ದರು. ಆ ಬಳಿಕ ಮದುವೆಯಾಗಲು ನಿರಾಕರಿಸಿದ್ದರು ಎಂದು ಆರೋಪಿಸಿದ್ದ ಯುವತಿ ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ನ.11ರಂದು ಅತ್ಯಾಚಾರದ ದೂರು ನೀಡಿದ್ದರು. ಅಂದು ಅದೇ ಠಾಣೆಯಲ್ಲಿ ಯುವತಿ ವಿರುದ್ಧವೂ ವಿಶ್ವನಾಥ್​ ಪ್ರತಿದೂರು ದಾಖಲಿಸಿದ್ದರು. ಇದನ್ನೂ ಓದಿರಿ ‘ಲೈಂಗಿಕ ಉತ್ಸವ’ದಲ್ಲಿ ಮಿಂದೆದ್ದ ನೂರಾರು ಜೋಡಿಗಳು! ನಾಲ್ಕು ದಿನ ನಡೆಯಿತು ಸೆಕ್ಸ್​ ಫೆಸ್ಟಿವಲ್​

ಬಿರಾದಾರ್ ದೂರಿನ ಪ್ರಕಾರ, ಯುವತಿ ಮದುವೆಯಾಗುವಂತೆ ಒತ್ತಾಯಿಸಿದ್ದಳು. ಮದುವೆಗೆ ಒಪ್ಪದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಬೆದರಿಕೆ ಒಡ್ಡಿದ್ದಲ್ಲದೆ, ಹತ್ತು ಲಕ್ಷ ರೂಪಾಯಿ ಕೊಡಬೇಕೆಂಬ ಬೇಡಿಕೆಯನ್ನೂ ಇಟ್ಟಿದ್ದಳು. ಒಂದೊಮ್ಮೆ ಹಣ ನೀಡದೇ ಹೋದರೆ ರೇಪ್ ಕೇಸ್ ಹಾಕುವುದಾಗಿ ಬೆದರಿಸಿದ್ದಳು ಎಂದು ಹೇಳಲಾಗಿದೆ.

ಅತ್ಯಾಚಾರ ಆರೋಪ ಪ್ರಕರಣ ಕೇಳಿಬಂದ ಬೆನ್ನಲ್ಲೇ ಪಿಎಸ್​ಐ ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಇನ್ನು ಪ್ರಕರಣದ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ವಿಶ್ವನಾಥ್ ಬಿರಾದಾರ್ ಸಲ್ಲಿಸಿದ್ದ ಅರ್ಜಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಸೆಷನ್ಸ್ ನ್ಯಾಯಾಲಯ 2020ರ ಡಿ.19ರಂದು ಮಾನ್ಯ ಮಾಡಿತ್ತು. ಇದೀಗ ಆರೋಪಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನು ರದ್ದು ಕೋರಿ ಸಂತ್ರಸ್ತೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಚ್.ಪಿ ಸಂದೇಶ್ ಅವರಿದ್ದ ಪೀಠ ಇತ್ತೀಚೆಗೆ ಮಾನ್ಯ ಮಾಡಿದ್ದು, ಕೂಡಲೇ ಆರೋಪಿಯನ್ನು ಬಂಧಿಸಿ ತನಿಖೆಗೊಳಪಡಿಸುವಂತೆ ಪೊಲೀಸರಿಗೆ ನಿರ್ದೇಶಿಸಿತ್ತು. ಇದನ್ನೂ ಓದಿರಿಕೇಂದ್ರ ಮಾಜಿ ಸಚಿವ ಪಿ.ರಂಗರಾಜನ್​ರ ಪತ್ನಿ ಕೊಲೆ! ಮನೆ ಕೆಲಸದವರಿಂದಲೇ ತಡರಾತ್ರಿ ಕೃತ್ಯ

ಕೋರ್ಟ್ ಆದೇಶವೇನು?: ಲೈಂಗಿಕ ದೌರ್ಜನ್ಯದಂಥ ಗಂಭೀರ ಆರೋಪವಿದ್ದರೂ ಪೊಲೀಸ್ ಅಧಿಕಾರಿಯಾಗಿರುವ ಆರೋಪಿಯ ರಕ್ಷಣೆಗೆ ಪೊಲೀಸರೇ ಮುಂದಾಗಿದ್ದಾರೆ. ಆರೋಪಿ ವಿರುದ್ಧ ಕೇವಲ ಎಫ್ಐಆರ್ ದಾಖಲಿಸಿ, ಬೇರಾವ ಕ್ರಮಗಳನ್ನೂ ಜರುಗಿಸಿಲ್ಲ. ಕಾನೂನಿನ ಕೈಗಳಿಂದ ತಪ್ಪಿಸಿಕೊಳ್ಳಲು ಸಹಕಾರ ನೀಡಿರುವ ಪೊಲೀಸರು ಆರೋಪಿಯ ರಕ್ಷಣೆಗೆ ನಿಂತಿರುವುದು ಸ್ಪಷ್ಟವಾಗುತ್ತಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿ ಆದೇಶಿದೆ. ಜತೆಗೆ, ಸಿಐಡಿ ತನಿಖಾಧಿಕಾರಿಗಳು ಪ್ರಕರಣದ ತನಿಖೆ ನಡೆಸಿ 4 ತಿಂಗಳ ಒಳಗೆ ಅಂತಿಮ ವರದಿ ಸಲ್ಲಿಸಬೇಕು ಎಂದು ಸೂಚಿಸಿತ್ತು. ಅದರಂತೆ ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ಪ್ರಕರಣದ ಎಲ್ಲಾ ದಾಖಲೆ ಹಾಗೂ ವಸ್ತುಗಳನ್ನು ಬೆಂಗಳೂರಿನ ಸಿಐಡಿ ಕಚೇರಿಗೆ ಹಸ್ತಾಂತರ ಮಾಡಲಾಗಿದೆ.

ಸಂತ್ರಸ್ತೆಯ ವಾದವೇನು?: ಪ್ರಕರಣದ ಸಂಬಂಧ ಖುದ್ದು ವಾದ ಮಂಡಿಸಿದ್ದ ಸಂತ್ರಸ್ತೆ, ಅನ್ಯಾಯಕ್ಕೊಳಗಾಗಿರುವ ನನಗೆ ನ್ಯಾಯ ಕೊಡಿಸುವ ಬದಲಿಗೆ ಪೊಲೀಸರಿಂದಲೇ ಕಿರುಕುಳ ಹಾಗೂ ಮಾನಸಿಕ ಹಿಂಸೆ ಅನುಭವಿಸಿದ್ದೇನೆ. ಆರೋಪಿ ವಿರುದ್ಧ ಪೊಲೀಸರು ಯಾವುದೇ ಕ್ರಮ ಜರುಗಿಸಿಲ್ಲ. ಇದರಿಂದ, ನನ್ನ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗಿದೆ. ಸಾಲದೆಂಬಂತೆ, ದೂರು ನೀಡಿದ್ದಕ್ಕೆ ನನ್ನ ವ್ಯಕ್ತಿತ್ವಕ್ಕೇ ಮಸಿ ಬಳಿಯಲಾಗಿದೆ. ನನಗಾದ ತೊಂದರೆ, ನೋವು ಮತ್ಯಾರಿಗೂ ಆಗಬಾರದು. ಆದ್ದರಿಂದ, ಆರೋಪಿಯ ನಿರೀಕ್ಷಣಾ ಜಾಮೀನು ರದ್ದುಪಡಿಸಬೇಕು. ನಿಷ್ಪಕ್ಷ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಬೇಕು ಎಂದು ಕೋರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net