ಬೆಂಗ್ಳೂರಲ್ಲಿ ಒಂಟಿ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ: ಕಾಮುಕನಿಂದ ವಿದ್ಯಾರ್ಥಿನಿಯನ್ನ ರಕ್ಷಿಸಿದ ತೃತೀಯಲಿಂಗಿಗಳು

rape case
Published on

ಬೆಂಗಳೂರು: ನಗರದಲ್ಲಿ ಒಂಟಿಯಾಗಿದ್ದ ಯುವತಿ ಮನೆಗೆ ಬೆಳಗಿನಜಾವ ನುಗ್ಗಿದ ಕಾಮುಕನೊಬ್ಬ, ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ. ಯುವತಿಯ ಚೀರಾಟ ಕೇಳಿ ಸ್ಥಳಕ್ಕೆ ಬಂದ ತೃತೀಯ ಲಿಂಗಿಗಳಿಬ್ಬರು ಕಾಮುಕನಿಂದ ಯುವತಿಯನ್ನ ರಕ್ಷಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಈ ಘಟನೆ ಈಜಿಪುರದಲ್ಲಿ ಜು.2ರಂದು ಬೆಳಗಿನಜಾವ 4 ಗಂಟೆಯಲ್ಲಿ ಸಂಭವಿಸಿದ್ದು, ವಿವೇಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಆರೋಪಿ ಮಸುರಲ್ ಶೇಕ್ ಎಂಬಾತನನ್ನು ಬಂಧಿಸಿದ್ದಾರೆ. ಸಂತ್ರಸ್ತೆಯು ಮಿಜೊರಾಂ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ನರ್ಸಿಂಗ್​ ವಿದ್ಯಾಭಾಸ ಮಾಡುತ್ತಿದ್ದಾರೆ. ಈಜಿಪುರದಲ್ಲಿ ಬಾಡಿಗೆ ಮನೆಯಲ್ಲಿ ಈಕೆ ವಾಸವಿದ್ದು, ಜು.2ರ ಬೆಳಗಿನಜಾವ ಅಲ್ಲಿಗೆ ಬಂದ ಆರೋಪಿ, ನಿರಂತರವಾಗಿ ಕಾಲಿಂಗ್ ಬೆಲ್ ಹೊಡೆದಿದ್ದಾನೆ. ಯಾರೋ ಬಂದಿದ್ದಾರೆಂದು ನಿದ್ರೆ ಮಂಪರಿನಲ್ಲಿ ಎದ್ದು ಬಂದ ಯುವತಿ, ಬಾಗಿಲು ತೆರೆಯುತ್ತಿದ್ದಂತೆ ಏಕಾಏಕಿ ಒಳಗೆ ನುಗ್ಗಿ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ. ಹಣ ನೀಡ್ತೀನಿ ಪ್ಲೀಸ್​ ನನ್ನನ್ನು ಬಿಟ್ಟುಬಿಡು ಎಂದು ಗೋಗರೆದರೂ ಆತ ಬಿಟ್ಟಿಲ್ಲ.

ಆಕೆಯ ಚೀರಾಟ ಕೇಳಿ ಸ್ಥಳಕ್ಕೆ ಬಂದ ತೃತೀಯ ಲಿಂಗಿಗಳಾದ ಮಾಹಿರಾ ಸಿಂಗ್ ಮತ್ತು ಇವರ ಸ್ನೇಹಿತೆ ಇಬ್ಬರೂ ವಿದ್ಯಾರ್ಥಿನಿಯನ್ನು ಕಾಪಾಡಿದ್ದಾರೆ. ಆರೋಪಿ ಮಸುರಲ್ ಶೇಕ್​ನನ್ನು ಸ್ಥಳೀಯರ ಸಹಾಯದಿಂದ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯು ವೆಸ್ಟ್ ಬೆಂಗಾಲ್ ಮೂಲದವ. ಹೋಟೆಲ್​ನಲ್ಲಿ ಕೆಲಸ ಮಾಡಲು ನಗರಕ್ಕೆ ಬಂದು ಇಂತಹ ಹೇಯ ಕೃತ್ಯವೆಸಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net