

ಹುಲಿಯೂರುದುರ್ಗ: ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಜನರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಮತ್ತು ದೇವಸ್ಥಾನಕ್ಕೆ ತೆರಳುತ್ತಿದ್ದ ಆಟೋ ನಡುವೆ ಶನಿವಾರ ಬೆಳಗ್ಗೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಅರ್ಜುನಹಳ್ಳಿ ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ.
ಕುಣಿಗಲ್ ಪಟ್ಟಣದಲ್ಲಿ ಶನಿವಾರ ಜೆಡಿಎಸ್ನ 'ಜನತಾ ಜಲಧಾರೆ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಜನರನ್ನು ಕರೆತರುತ್ತಿದ್ದ ಬಸ್ ಮತ್ತು ಒಂದೇ ಕುಟುಂಬದ ಐವರನ್ನು ದೇಗುಲಕ್ಕೆ ಕರೆದೊಯ್ಯುತ್ತಿದ್ದ ಆಟೋ ನಡುವೆ ಮಾರ್ಗಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ರಸ್ತೆ ಪಕ್ಕದ ಗದ್ದೆಗೆ ಬಸ್ ಮಗುಚಿದೆ. ಆಟೋದಲ್ಲಿದ್ದ ಗೌಡಗೆರೆ ಗ್ರಾಮದ ರಾಮಯ್ಯ(60) ಸ್ಥಳದಲ್ಲೇ ಸಾವನ್ನಪ್ಪಿದ್ದು, ಆಟೊದಲ್ಲಿದ್ದ ಸುರೇಶ್(30), ಪ್ರೀತಮ್ (12), ಮನಿಷಾ(11), ಮೌನಿತ್(7) ಅವರ ಕೈ-ಕಾಲು ಮುರಿದು ಗಂಭೀರ ಸ್ಥಿತಿಯಲ್ಲಿದ್ದಾರೆ. ಗಾಯಾಳುಗಳನ್ನು ಬೆಳ್ಳೂರು ಕ್ರಾಸ್ನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸ್ನಲ್ಲಿದ್ದ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಪಿಎಸ್ಐ ಚೇತನ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.