ಒಕ್ಕಣೆ ಕಣವಾದ ರಸ್ತೆ!

Okkane1
Published on

*ದ್ವಿಚಕ್ರ ವಾಹನ ಸವಾರರ ಸಂಚಾರಕ್ಕೆ ಕುತ್ತು

*ಸಮುದಾಯ ಕಣಕ್ಕೆ ರೈತರ ಆಗ್ರಹ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ವಾಹನಗಳು ಓಡಾಡುವ ರಸ್ತೆಗಳೇ ರಾಗಿ, ಭತ್ತ ಒಕ್ಕಣೆ ಕಣವಾಗಿ ಮಾರ್ಪಟ್ಟಿದ್ದು, ಈ ಪರಿಣಾಮ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಗ್ರಾಮೀಣ ಭಾಗದಲ್ಲಿ ರಸ್ತೆಗಳಲ್ಲೇ ರಾಗಿ, ಭತ್ತ ಒಕ್ಕಣೆ ಮಾಡುವುದು ಹೆಚ್ಚಾಗಿದ್ದು, ಇದರಿಂದ ವಾಹನ ಸವಾರರು ಜಾಗರೂಕರಾಗಿ ಓಡಾಟ ನಡೆಸಬೇಕಿದೆ. ಎಷ್ಟೇ ಮುಂಜಾಗ್ರತೆ ವಹಿಸಿ ವಾಹನ ಚಲಾಯಿಸಿದರೂ ರಸ್ತೆಗಳಲ್ಲಿ ಒಕ್ಕಣೆ ಮಾಡಿದ ಸ್ಥಳಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಸ್ಥಿತಿ ಇದೆ.

ರಾಗಿ ನುಣುಪಾಗಿರುವುದರಿಂದ ವಾಹನಗಳು ಸುಲಭವಾಗಿ ಜಾರುವುದು ಸಾಮಾನ್ಯ. ಅಂತೆಯೇ, ಪ್ರತಿನಿತ್ಯ ಒಂದಲ್ಲ ಒಂದು ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದಾರೆ.

ರಾಗಿ ಮತ್ತು ಭತ್ತದ ಹುಲ್ಲು ರಸ್ತೆಯಲ್ಲಿ ಹರಡುವುದರಿಂದ ಕಾರು, ಬಸ್ ಮತ್ತು ಇತರ ವಾಹನಗಳ ಕೆಳಭಾಗದಲ್ಲಿ ಹುಲ್ಲು ಸಿಲುಕಿ ವಾಹನಗಳಿಗೆ ಹಾನಿ ಉಂಟಾಗುತ್ತಿದೆ. ಸಂಬಂಧಪಟ್ಟ ಇಲಾಖೆಗಳು ರೈತರಿಗೆ ಅಗತ್ಯ ಮಾಹಿತಿ, ಸೂಕ್ತ ತಿಳಿವಳಿಕೆ ನೀಡಿ ರಸ್ತೆ ಕಣ ತಪ್ಪಿಸಬೇಕು ಎನ್ನುತ್ತಾರೆ ಸಾರ್ವಜನಿಕರು.

ಖರ್ಚಿಲ್ಲದೆ ಒಕ್ಕಣೆ!:

ರಾಗಿ, ಭತ್ತ ಒಕ್ಕಣೆ ಸಮಯವಾಗಿದ್ದು, ರೈತರು ಜಮೀನುಗಳಲ್ಲಿ ಮೆದೆ ಹಾಕಿ ಸಂಕ್ರಾಂತಿ ನಂತರ ಕಣ ಮಾಡಿ, ಜಾನುವಾರು ಇಲ್ಲವೇ ಟ್ರ್ಯಾಕ್ಟರ್ ಮೂಲಕ ಒಕ್ಕಣೆ ಪ್ರಾರಂಭಿಸುತ್ತಿದ್ದರು. ಆದರೆ, ಯಾವುದೇ ಖರ್ಚು ಇಲ್ಲದೆ ರಸ್ತೆಯನ್ನೇ ಕಣವನ್ನಾಗಿ ಮಾಡಿಕೊಂಡಿರುವುದು ಅಪಾಯಕ್ಕೆ ಆಹ್ವಾನ ನೀಡುವಂತಾಗಿದೆ.

ಅನ್ನದಾತರ ಮನವೊಲಿಕೆ: ಜಿಲ್ಲೆಯಲ್ಲಿ ಹಲವು ರಸ್ತೆಗಳಲ್ಲಿ ರಾಗಿ, ಭತ್ತ ಒಕ್ಕಣೆ ನಡೆಯುತ್ತಲೇ ಇದೆ. ರೈತರಿಗೆ ರಸ್ತೆ ಒಕ್ಕಣೆಯಿಂದ ಆಗುತ್ತಿರುವ ತೊಂದರೆಯನ್ನು ತಿಳಿಸಿ, ಸೂಕ್ತ ಸ್ಥಳದಲ್ಲಿ ಒಕ್ಕಣೆ ಮಾಡುವಂತೆ ಪೊಲೀಸರು ರೈತರ ಮನವೊಲಿಸಬೇಕು ಎಂಬುದು ಸಾರ್ವಜನಿಕರ ಮಾತಾಗಿದೆ.

ಬಸ್ಸಿನ ಬ್ರೇಕ್‌ರಾಡ್ ತುಂಡು

ಚನ್ನಪಟ್ಟಣ-ಕಾಡನಕುಪ್ಪೆ ಮಾರ್ಗದಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್ ಮಲ್ಲಂಗೆರೆ ಸಮೀಪ ರಸ್ತೆಯಲ್ಲಿ ಒಕ್ಕಣೆ ಹಾಕಿದ್ದ ಭತ್ತದ ಹುಲ್ಲಿನ ಮೇಲೆ ಸಂಚರಿಸಿದಾಗ ಬಸ್ಸಿನ ಬ್ರೇಕ್‌ರಾಡ್‌ಗೆ ಹುಲ್ಲು ಸಿಲುಕಿಕೊಂಡು ರಾಡ್ ತುಂಡಾಗಿ ನಿಯಂತ್ರಣ ತಪ್ಪಿದೆ. ಅಷ್ಟರಲ್ಲಿ ಚಾಲಕನ ಜಾಣ್ಮೆಯಿಂದ ಅಪಾಯ ತಪ್ಪಿದೆ. ರಸ್ತೆ ಇಳಿಜಾರು ಇದ್ದುದರಿಂದ ಒಂದಷ್ಟು ದೂರ ಬಸ್ ಮುಂದೆ ಚಲಿಸಿದ್ದರೂ ಅಪಾಯವಾಗುತ್ತಿತ್ತು ಎಂಬುದು ಪ್ರತ್ಯಕ್ಷದರ್ಶಿಗಳ ಮಾತು.

ರೈತರ ಅಳಲು

ವಾತಾವರಣ ಬದಲಾವಣೆಯಿಂದಾಗಿ ಮಳೆ ಯಾವಾಗ ಬರುತ್ತದೆ ಎಂದು ಗೊತ್ತಿಲ್ಲ. ಮೆದೆ ಹಾಕಿ ಒಕ್ಕಣೆ ಮಾಡುವ ಸಮಯಕ್ಕೆ ರಾಗಿಯಲ್ಲಿ ಕೆಲವೊಂದು ಬಾರಿ ಮೊಳಕೆ ಬರುತ್ತದೆ. ಹುಲ್ಲು ಕಪ್ಪಾಗುತ್ತದೆ. ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ ಇದೆ. ರಸ್ತೆ ಒಕ್ಕಣೆ ಒಂದೇ ದಿನದ ಕೆಲಸ, ಆದರೆ ಕಣ ಒಕ್ಕಣೆಗೆ ವಾರಗಟ್ಟಲೆ ಬೇಕು. ಬೆಳೆದ ಬೆಳೆಗಿಂತ ಒಕ್ಕಣೆಗೆ ವಿಪರೀತ ವೆಚ್ಚವಾಗುತ್ತದೆ. ಸರ್ಕಾರ ಕಣಕ್ಕೆ ಯಾವುದೇ ಸಹಾಯ ನೀಡುತ್ತಿಲ್ಲ. ಗ್ರಾಮಗಳಲ್ಲಿ ಸಮುದಾಯ ಕಣಗಳು ನಿರ್ಮಾಣವಾಗಿಲ್ಲ ಎಂಬುದು ರೈತರ ಅಳಲು.

ಕಣ ಮಾಡಲು ಸಾವಿರಾರು ರೂಪಾಯಿ ವ್ಯಯಿಸಬೇಕು. ಇತ್ತೀಚೆಗೆ ಬೆಳೆ ಆಗುವುದು ಕಡಿಮೆ. ಬಿಸಿಲಿದ್ದ ಸಮಯದಲ್ಲಿ ರಸ್ತೆಗೆ ಹಾಕಿಕೊಂಡು ಒಂದೇ ದಿನದಲ್ಲೇ ಒಕ್ಕಣೆ ಮಾಡಿಕೊಳ್ಳುತ್ತೇವೆ. ರಸ್ತೆಯಲ್ಲಿ ಓಡಾಟ ನಡೆಸುವ ವಾಹನಗಳಿಗೆ ಆದಷ್ಟು ತೊಂದರೆ ಆಗದಂತೆ ಜಾಗರೂಕತೆಯಿಂದಲೇ ಒಕ್ಕಣೆ ಮಾಡುತ್ತಿದ್ದೇವೆ ಎನ್ನುತ್ತಾರೆ ಹೆಸರೇಳಲಿಚ್ಛಸದ ರೈತ.

ಸಮುದಾಯ ಕಣ ಆಗಲಿ

ಸರ್ಕಾರ ರಸ್ತೆ ಒಕ್ಕಣೆ ರೈತರಿಂದ ತಪ್ಪಿಸಲು ರೈತರಿಗೆ ಪ್ರತಿಗ್ರಾಮಕ್ಕೆ 2-3ರಂತೆ ಸಮುದಾಯ ಕಣ ನಿರ್ಮಿಸಿಕೊಡಲಿ. ಇದರಿಂದ ವರ್ಷದ ಎಲ್ಲ ದಿನಗಳಲ್ಲೂ ರೈತರು ಒಕ್ಕಣೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ತೆಗೆ ಕಟಾವು ಸಮಯದಲ್ಲಿ ರೈತರಿಗೆ ರಸ್ತೆ ಒಕ್ಕಣೆಯಿಂದ ಆಗುವ ದುಷ್ಪರಿಣಾಮಗಳು, ಅಪಾಯಗಳ ಬಗ್ಗೆ ಮನವರಿಕೆ ಮಾಡಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯ.

--

ರೈತರಿಗೆ ಒಕ್ಕಣೆ ಖರ್ಚು ಅಧಿಕವಾಗಿದೆ ನಿಜ. ಆದರೆ, ರಸ್ತೆಯಲ್ಲಿ ಒಕ್ಕಣೆ ಬೇಡ, ಹಲವು ಜನರು ಇದರಿಂದ ತೊಂದರೆ ಅನು‘ವಿಸಬೇಕಿದೆ. ಕೆಲವು ರಸ್ತೆಗಳು ಒಕ್ಕಣೆ ಕಣವಾಗುತ್ತಿವೆ. ಮಹಿಳೆಯರು, ಕಾಲೇಜು ವಿದ್ಯಾರ್ಥಿಗಳು, ವಯಸ್ಸಾದವರು ದ್ವಿಚಕ್ರ ವಾಹನಗಳಲ್ಲಿ ಓಡಾಟ ನಡೆಸುತ್ತಾರೆ. ನಿಯಂತ್ರಣ ತಪ್ಪಿ ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದಾರೆ. ರಸ್ತೆಯಲ್ಲಿ ಒಕ್ಕಣೆ ನಿಲ್ಲಿಸಿ ವಾಹನ ಸವಾರರನ್ನು ಅಪಘಾತದಿಂದ ಪಾರುಮಾಡಬೇಕು.ಕಿರಣ್, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net