ಬೆಳಗಾವಿಯಲ್ಲಿ ಮತ್ತೊಂದು ಮನೆ ಕುಸಿತ: ತಡರಾತ್ರಿ ಒಂದೇ ಕುಟುಂಬದ 8 ಮಂದಿ ಬದುಕಿದ್ದೇ ಪವಾಡ

building collapses belagavi
Published on

ಬೆಳಗಾವಿ: ಬಡಾಲ ಅಂಕಲಗಿ ಗ್ರಾಮದಲ್ಲಿ ಕಳೆದ ವಾರ ಭಾರೀ ಮಳೆಗೆ ಮನೆ ಗೋಡೆ ಕುಸಿದು ಒಂದೇ ಕುಟುಂಬದ 6 ಮಂದಿ ಸೇರಿ 7 ಜನ ಜೀವಂತ ಸಮಾಧಿಯಾದ ಘಟನೆ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ಹೃದಯವಿದ್ರಾವಕ ಘಟನೆ ಮಾಸುವ ಮುನ್ನವೇ ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ದುರಂತ ಸಂಭವಿಸುತ್ತಿತ್ತು, ಅದೃಷ್ಟವಶಾತ್​ ಒಂದೇ ಕುಟುಂಬದ 8 ಮಂದಿ ಅಪಾಯದಿಂದ ಪಾರಾಗಿದ್ದಾರೆ.

ಎರಡು ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಯಿಂದಾಗಿ ಬೆಳಗಾವಿ ತಾಲೂಕಿನ ಅಗಸಗಿ ಗ್ರಾಮದ ಕಲ್ಮೇಶ್ವರ ಗಲ್ಲಿಯಲ್ಲಿ ಮನೆಗೆ ನೀರು ನುಗ್ಗಿತ್ತು. ಇದೇ ಮನೆಯಲ್ಲಿ ಬಾಳು ಕಡೋಲ್ಕರ್ ಮತ್ತು ಬಸವಣ್ಣಿ ಕಡೋಲ್ಕರ್ ಎಂಬ ಸಹೋದರರ ಕುಟುಂಬ ಪ್ರತ್ಯೇಕವಾಗಿ ವಾಸವಿತ್ತು. ಮಳೆ ನೀರನ್ನು ಹೊರಹಾಕಿ ಅದೇ ಮನೆಯಲ್ಲಿ ಕುಟುಂಬಸ್ಥರು ವಾಸವಿದ್ದರು. ಭಾನುವಾರ ಮಧ್ಯರಾತ್ರಿ ಛಾವಣಿ ಅಲುಗಾಡುವ ಶಬ್ದಕೇಳಿ, ಮನೆಯಲ್ಲಿದ್ದ 8 ಮಂದಿಯೂ ಮನೆಯಿಂದ ಹೊರ ಓಡಿ ಬಂದರಷ್ಟೇ... ನೋಡನೋಡುತ್ತಿದ್ದಂತೆ ಮನೆ ಗೋಡೆ ಕುಸಿದು ಬಿದ್ದಿದೆ.

ಮನೆಯಿಂದ ಹೊರ ಬರೋಕೆ ಕ್ಷಣಮಾತ್ರ ತಡವಾಗಿದ್ರೂ ಸಾವು-ನೋವು ಸಂಭವಿಸುತ್ತಿತ್ತು. ಅದೃಷ್ಟವಶಾತ್​ ಕುಟುಂಬದ 8 ಮಂದಿಯ ಪ್ರಾಣವೂ ಉಳಿದಿದೆ. ಮನೆ ಕುಸಿದ ಪರಿಣಾಮ ಕಡೋಲ್ಕರ್ ಸಹೋದರರ ಕುಟುಂಬ ಬೀದಿಗೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net