ಬಲಿಗೆ ಕಾದುನಿಂತಿದೆ ಮುರಿದ ವಿದ್ಯುತ್​ ಕಂಬ!

21 RMN-MGD P3
Published on

ಗಾಂಧಿ ವೃತ್ತದಲ್ಲಿ ಅವ್ಯವಸ್ಥೆ

ಟ್ರಾನ್ಸ್​ ಫಾರ್ಮರ್​ ಪೆಟ್ಟಿಗೆ ಸಮೀಪ ಅರ್ಥಿಂಗ್​ ಸಮಸ್ಯೆ

ಮಾಗಡಿ

ಪಟ್ಟಣದ ಗಾಂಧಿ ವೃತ್ತದಲ್ಲಿ ಅಳವಡಿಸಲಾಗಿರುವ ಬೆಸ್ಕಾಂ ವಿದ್ಯುತ್​ ಕಂಬ ಮುರಿದು ನಾಗರಿಕರ ಬಲಿಗಾಗಿ ಕಾದು ನಿಂತಿದೆ.

ಪಟ್ಟಣದ ಪ್ರಮುಖ ವೃತ್ತವಾದ ಇಲ್ಲಿ ವಿದ್ಯುತ್​ ಕಂಬವನ್ನು ರಸ್ತೆ ಬದಿಯಲ್ಲೇ ಆಳವಡಿಸಿರುವುದರಿಂದ ಕಂಬದ ಕೆಳಭಾಗ ಮುರಿದಿದ್ದು, ಹಾಗೆಯೇ ನಿಂತಿದೆ. ಭಾರೀ ಮಳೆ, ಗಾಳಿ ಬಂದರೆ ಯಾವಾಗ, ಯಾರ ಮೇಲೆ ಬೀಳುತ್ತದೋ ಎಂಬ ಭಯ ಆವರಿಸಿದೆ.

ಗಾಂಧಿ ವೃತ್ತದ ರಸ್ತೆಯಲ್ಲಿ ದಿನದ 24 ಗಂಟೆಗಳ ಕಾಲ ನಾಗರಿಕರು, ವಾಹನಗಳು ಸಂಚರಿಸುವುದಲ್ಲದೆ, ಪದವಿ ಪೂರ್ವ, ಪ್ರೌಢಶಾಲೆ, ಪ್ರಥಮ ದರ್ಜೆ ಕಾಲೇಜು, ಶ್ರೀರಂಗನಾಥ ಸ್ವಾಮಿ ದೇವಾಲಯ, ತಾಲೂಕು ಪಂಚಾಯಿತಿ, ತಹಸೀಲ್ದಾರ್​ ಕಚೇರಿಗಳಿಗೆಂದು ಸಾವಿರಾರು ಮಂದಿ ಇದೇ ಮಾರ್ಗವಾಗಿ ಸಂಚರಿಸುತ್ತಾರೆ. ನಾಗರಿಕರ ಮೇಲೆ ಈ ಕಂಬ ಮುರಿದು ಬಿದ್ದರೆ ಸಾವು&ನೋವು ಸಂಭವಿಸುವ ಸಾಧ್ಯತೆ ಹೆಚ್ಚಿದೆ.

ಆದ್ದರಿಂದ ಅವಡ ಸಂಭವಿಸುವ ಮುನ್ನ ಮುರಿದ ವಿದ್ಯುತ್​ ಕಂಬ ತೆರವುಗೊಳಿಸಿ, ಹೊಸ ಕಂಬ ಆಳವಡಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಗಾಂಧಿನಗರದ ನಿವಾಸಿ ಹೋಟೆಲ್​ ಮೋಹನ್​ ಮನವಿ ಮಾಡಿದರು.

ಗಾಂಧಿನಗರ ವೃತ್ತದ ಸಮೀಪವಿರುವ ಗಣಪತಿ ದೇವಾಲಯದ ಬಳಿ ಅಳವಡಿಸಿರುವ ಟ್ರಾನ್ಸ್​ ಫಾರ್ಮರ ಬೃಹತ್​ ಗಾತ್ರದ ಮರದ ಕೊಂಬೆಗಳು ವಿದ್ಯುತ್​ ಲೈನ್​ ಹಾಗೂ ಟ್ರಾನ್ಸ್​ ಫಾರ್ಮರ್​ ಪೆಟ್ಟಿಗೆ ಮೇಲೆ ಬಿದ್ದು, ಪದೇಪದೆ ವಿದ್ಯುತ್​ ಶಾರ್ಟ್​ಸಕ್ಯೂರ್ಟ್​ ಉಂಟಾಗುತ್ತಿದ್ದು, ಈ ವ್ಯಾಪ್ತಿಯ ನೂರಾರು ಮನೆಗಳ ಟಿವಿ, ಫ್ರಿಡ್ಜ್​, ವಾಷಿಂಗ್​ ಮಿಷನ್​, ಬಲ್ಬ್​ಗಳು ನಿರಂತರವಾಗಿ ಸುಟ್ಟುಹೋಗುತ್ತಿವೆ. ಮಳೆ ಬಂದರೆ ಟ್ರಾನ್ಸ್​ಾರ್ಮರ್​ ಬಳಿ ಅರ್ಥಿಂಗ್​ ಸಮಸ್ಯೆ ಎದುರಾಗುತ್ತದೆ.

ರಸ್ತೆ ಬದಿಯಲ್ಲೇ ಟ್ರಾನ್ಸ್​ ಫಾರ್ಮರ್​ ಅಳವಡಿಸಿರುವುದರಿಂದ ಮಳೆ ಬಂದರೆ ನಡೆದುಕೊಂಡು ಹೋಗಲು ಭಯಪಡುವಂತಾಗಿದೆ. ಕೂಡಲೇ ಬೆಸ್ಕಾಂ ಇಲಾಖೆ ಸಿಬ್ಬಂದಿ ಸಮಸ್ಯೆ ಸರಿಪಡಿಸಬೇಕು ಎಂಬುದು ನಮ್ಮ ಒತ್ತಾಯ. > ನಂಜುಂಡ, ಸ್ಥಳಿಯ ನಿವಾಸಿ

ವಿದ್ಯುತ್​ ಕಣ್ಣಾಮುಚ್ಚಾಲೆ!

ಮಾಗಡಿ ಪಟ್ಟಣದಲ್ಲಿ ನಿರಂತರವಾಗಿ ವಿದ್ಯುತ್​ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ. 3 ದಿನಗಳಿಂದ ಬೆಳಗ್ಗೆಯಿಂದ ಸಂಜೆಯವರೆಗೆ 10 ಬಾರಿ ವಿದ್ಯುತ್​ ಕಡಿತಗೊಳಿಸುತ್ತಾರೆ. ಇನ್ನೂ ರಾತ್ರಿ ಹೆಚ್ಚು ಸಮಯ ವಿದ್ಯುತ್​ ತೆಗೆಯುವುದರಿಂದ ಮಕ್ಕಳು ಓದಲು ಸಾಧ್ಯವಾಗುತ್ತಿಲ್ಲ. ವಯೋವೃದ್ಧರು, ವಿಕಲಚೇತನರು ರಸ್ತೆಯಲ್ಲಿ ಸಂಚರಿಸಲು ತೊಂದರೆ ಉಂಟಾಗಿದೆ. ಜತೆಗೆ ಕಳ್ಳರ ಕೈಚಳಕ ಹೆಚ್ಚಾಗಿದೆ. ಸಮರ್ಪಕವಾಗಿ ವಿದ್ಯುತ್​ ಪೂರೈಕೆ ಮಾಡುವಂತೆ ಸಾಕಷ್ಟು ಬಾರಿ ಬೆಸ್ಕಾಂ ಸಿಬ್ಬಂದಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ನಾಗರಿಕರು ಬೆಸ್ಕಾಂ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net