

ಉಡುಪಿ: ಹಿರಿಯ ಸಸ್ಯವಿಜ್ಞಾನಿ, ಪೂರ್ಣಪ್ರಜ್ಞಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಕೆ ಗೋಪಾಲಕೃಷ್ಣ ಭಟ್ (75) ಗುರುವಾರ ಮುಂಜಾನೆ ಚಿಟ್ಪಾಡಿ ಸ್ವಗೃಹದಲ್ಲಿ ನಿಧನರಾದರು.
ಮೂಲತಃ ಕಾಸರಗೋಡು ಜಿಲ್ಲೆಯ ನೀರ್ಚಾಲು ಕಾಕುಂಜೆಯವರಾದ ಗೋಪಾಲಕೃಷ್ಣ ಭಟ್ ಅವರು 33 ವರ್ಷಗಳ ಕಾಲ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಸಸ್ಯ ಶಾಸ್ತ್ರದಲ್ಲಿ ಉನ್ನತ ಅಧ್ಯಯನ ನಡೆಸಿರುವ ಅವರು ಸ್ಥಳೀಯ ಸಸ್ಯಗಳನ್ನು ಗುರುತಿಸಲು ಅನುಕೂಲವಾಗುವಂತೆ ವಿಶ್ಲೇಷಣಾತ್ಮಕ ಪುಸ್ತಕ ಬರೆದಿದ್ದಾರೆ. 'ಫ್ಲೋರಾ ಆಫ್ ಉಡುಪಿ, ಫ್ಲೋರಾ ಆಫ್ ದಕ್ಷಿಣ ಕನ್ನಡ' ಎಂಬ ಬೃಹತ್ ಸಸ್ಯಶಾಸ್ತ್ರೀಯ ನಿಘಂಟು ಹಾಗೂ ಸಂಶೋಧನಾ ಗ್ರಂಥಗಳನ್ನು ರಚಿಸಿದ್ದಾರೆ.