ಗಂಡನಿಗೆ ಹುಡುಗೀರ ಶೋಕಿ, ನನ್ನನ್ನು ಜೀವಂತ ಶವ ಮಾಡಿದ್ದಾನೆ, ಕಿರುಕುಳ ಸಹಿಸಲಾಗ್ತಿಲ್ಲ... ಕಣ್ಣೀರು ತರಿಸುತ್ತೆ ಈ ಸ್ಟೋರಿ

vaani
Published on

ಬಾಗಲಕೋಟೆ: ಮಾತಿನಲ್ಲೇ ಮಂಟಪ ಕಟ್ಟಿ ಮೋಸದಿಂದ ಮದುವೆ ಆಗಿದ್ದಲ್ಲದೆ, ಇದೀಗ ಪತ್ನಿಗೆ ಊಟ ಕೊಡದೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ ಪತಿ ಮಹಾಶಯನೊಬ್ಬನ ಹೀನ ಕೃತ್ಯ ಬಾಗಲಕೋಟೆ ನಗರದಲ್ಲಿ ಬೆಳಕಿಗೆ ಬಂದಿದೆ. ನವನಗರದ ವಾಪಪೇಯಿ ಕಾಲನಿಯಲ್ಲಿ ಗುಬ್ಬಿಗೂಡಿನಂತಹ, ವಿದ್ಯುತ್ ಸಂಪರ್ಕವೂ ಇಲ್ಲದ ಕತ್ತಲು ಮನೆಯಲ್ಲಿ ಎರಡು ವರ್ಷದಿಂದ ಅಂಧ ಪತ್ನಿಯನ್ನು ಇಟ್ಟಿದ್ದಾನೆ. ಊಟಕ್ಕೂ ಗತಿ ಇಲ್ಲದೆ ಅವರಿವರು ಕೊಡುವ ಅನ್ನ, ಆಹಾರ ಸೇವಿಸಿ ನರಕ ಸದೃಶ ಜೀವನ ನಡೆಸುತ್ತಿದ್ದಾಳೆ.

ಮೂಲತಃ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಕೆಬಿ ಕ್ರಾಸ್ ಮೂಲದ ವಾಣಿ ಎನ್ನುವ ಮಹಿಳೆ ಸಂಕಷ್ಟದ ಕೂಪದಲ್ಲಿ ಸಿಕ್ಕು ನಿತ್ಯ ಬೇಯುತ್ತಿದ್ದಾಳೆ. ಬಾಗಲಕೋಟೆ ನಗರದ ಮಹೇಶ ಶಹಾಪುರ ಎನ್ನುವ ವ್ಯಕ್ತಿಯೇ ವಾಣಿಯನ್ನು ಮದುವೆಯಾಗಿ ಇದೀಗ ಇನ್ನಿಲ್ಲದ ಕಷ್ಟ ಕೊಡುತ್ತಿದ್ದಾನೆ ಎನ್ನುವ ಆರೋಪಗಳು ಕೇಳಿ ಬಂದಿವೆ. ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥ ಸ್ಥಿತಿಯಲ್ಲಿದ್ದ ವಾಣಿ ಅವರನ್ನು ಸ್ನೇಹಿತೆಯ ಮೂಲಕ ಸಂಪರ್ಕಿಸಿ ಸುಂದರ ಜೀವನ ನೀಡುವುದಾಗಿ ನಂಬಿಸಿದ್ದ. ಹಿರಿಯರ ಸಮ್ಮುಖದಲ್ಲಿ 2015ರಲ್ಲಿ ಮದುವೆ ಮಾಡಿಕೊಂಡಿದ್ದ. ಆದರೆ, ಅದಾಗಲೇ ಮಹೇಶನಿಗೆ ಅನ್ಯ ಧರ್ಮದ ಯುವತಿ ಜತೆಗೆ ಮದುವೆ ಆಗಿತ್ತು ಎನ್ನುವುದು ನಂತರದ ವರ್ಷಗಳಲ್ಲಿ ವಾಣಿ ಅವರಿಗೆ ಗೊತ್ತಾಗಿದೆ.

ಆರಂಭದ ವರ್ಷಗಳಲ್ಲಿ ಪತ್ನಿಯನ್ನು ಬಾಗಲಕೋಟೆಗೆ ಕರೆದು ತರಲು ನಾನಾ ಸುಳ್ಳುಗಳನ್ನು ಹೇಳಿ ಬೆಂಗಳೂರಲ್ಲಿ ಬಿಟ್ಟಿದ್ದ. ವಾಣಿ ಅವರು ವಿದ್ಯಾವಂತೆ ಆಗಿದ್ದರಿಂದ ಅಲ್ಲಿ ಉದ್ಯೋಗ ಮಾಡಿಕೊಂಡಿದ್ದರಂತೆ. ಮದುವೆಯಾದಾಗಿನಿಂದಲೂ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳಲೇ ಇಲ್ಲವಂತೆ. ಒಂದೂವರೆ ವರ್ಷದ ಹಿಂದೆ ವಾಣಿ ಅವರನ್ನು ಬಾಗಲಕೋಟೆಗೆ ಕರೆತಂದಿದ್ದ ಪತಿ ಮಹೇಶ, ಪತ್ನಿಯನ್ನು ತನ್ನ ಮನೆಯಲ್ಲಿ ಇಟ್ಟುಕೊಳ್ಳದೆ ನವನಗರದ ವಾಜಪೇಯಿ ಕಾಲನಿಯಲ್ಲಿ ಸಂಬಂಧಿಕರೊಬ್ಬರ ಖಾಲಿ ಮನೆಯಲ್ಲಿ ಒಬ್ಬಳನ್ನೇ ಬಿಟ್ಟಿದ್ದಾನೆ.

ಪತ್ನಿಗೆ ನಿರಂತರ ದೈಹಿಕ ಮತ್ತು ಮಾನಸಿಕ ಹಿಂಸೆ ಕೊಡುತ್ತಿದ್ದಾನೆ. ಮನೆಗೂ ಬರಲ್ಲ. ಯಾವಾಗಲೋ ಒಮ್ಮೆ ಬಂದು ಎರಡ್ಮೂರು ದಿನಗಳಿಗೆ ಆಗುವಷ್ಟು ದಿನಸಿ ವಸ್ತು ಇಟ್ಟು ಹೋಗುತ್ತಾನೆ. ಪತ್ನಿಗೆ ಬಿಪಿ, ಶುಗರ್ ಇದ್ದು, ಆರೋಗ್ಯ ತಪಾಸಣೆ ಮಾಡಿಸಲ್ಲ, ಔಷಧವನ್ನು ಕೊಡಿಸುತ್ತಿಲ್ಲವಂತೆ. ಇದರಿಂದ ವಾಣಿಗೆ ಒಂದು ಕಣ್ಣು ಸಂಪೂರ್ಣ ಬಂದ್ ಆಗಿದ್ದು, ಇನ್ನೊಂದು ಕಣ್ಣು ಮಂಜು ಮಂಜಾಗಿದೆ. ತನ್ನ ಈ ಅವಸ್ಥೆಗೆ ಗಂಡನ ಮೋಸವೇ ಕಾರಣ ಎನ್ನುವುದು ವಾಣಿ ಅವರ ನೇರ ಆರೋಪ.

ಇಲ್ಲಿ ನನ್ನ ಗಂಡ ನನ್ನನ್ನು ಜೀವಂತ ಶವದಂತೆ ಮಾಡಿದ್ದಾನೆ. ಇದೀಗ ಮತ್ತೊಂದು ಮದುವೆಯನ್ನು ಮಾಡಿಕೊಂಡಿದ್ದಾನೆ ಎಂದು ತಿಳಿದಿದೆ. ಹುಡುಗಿರ ಶೋಕಿ ಇರುವುದು ನನಗೆ ಮದುವೆಯಾದ ಮೇಲೆ ಗೊತ್ತಾಗಿದೆ. ನಮ್ಮಂತ ಮುಗ್ಧ ಹುಡುಗಿಯರನ್ನು ಟಾರ್ಗೆಟ್ ಮಾಡಿ ನಡುನೀರಲ್ಲಿ ಕೈಬಿಡುತ್ತಾನೆ. ಇವನಿಗೆ ಉಗ್ರ ಶಿಕ್ಷೆ ಆಗಬೇಕು ಎಂದು ಕಣ್ಣೀರು ಹಾಕುತ್ತಲೇ ಹೇಳುತ್ತಾರೆ ನೊಂದ ಮಹಿಳೆ ವಾಣಿ.

ಹೇರ್ ಕಟಿಂಗ್ ಸಲೂನ್ ಮಾಲೀಕ: ಇನ್ನು ಮಹೇಶ ನವನಗರದಲ್ಲಿ ಹೇರ್ ಕಟಿಂಗ್ ಸಲೂನ್ ಇಟ್ಟುಕೊಂಡಿದ್ದಾನೆ. ಪತ್ನಿ ವಾಣಿಯನ್ನು ಮನೆಬಿಟ್ಟು ಹೋಗಿಬಿಡು, ಡಿವೋರ್ಸ್ ಕೊಡುತ್ತೇನೆ ಎಂದು ಬೆದರಿಸುತ್ತಾನಂತೆ. ಈ ಬಗ್ಗೆ ಹಲವು ಬಾರಿ ಪೊಲೀಸ್ ಠಾಣೆಗೆ ಹೋಗಿ ಬಂದಿದ್ದಾರೆ. ಅಲ್ಲದೆ, ಪತ್ನಿಗೆ ಜೀವನಾಂಶ ಕೊಡುವುದಾಗಿ ಹೇಳಿದ್ದ ಭರವಸೆಯಂತೆಯೂ ನಡೆದುಕೊಂಡಿಲ್ಲ. ಪುಣ್ಯಕ್ಕೆ ಅಕ್ಕಪಕ್ಕದ ಮನೆಯವರು ಚೆನ್ನಾಗಿ ಇದ್ದಾರೆ. ಅವರೇ ನನಗೆಲ್ಲ ಸಹಾಯ ಮಾಡುತ್ತಿದ್ದಾರೆ. ಅವರಿಲ್ಲ ಅಂದಿದ್ದರೆ ಇಷ್ಟೊತ್ತಿಗೆ ನಾನು ಸತ್ತು ಹೋಗಿರುತ್ತಿದ್ದೆ ಎನ್ನುತ್ತಾರೆ ವಾಣಿ.

ಸಂಪರ್ಕಕ್ಕೆ ಸಿಗದ ಮಹೇಶ: ಇನ್ನು ಈ ಬಗ್ಗೆ ಪತಿ ಮಹೇಶಗೆ ವಿವರಣೆ ಕೇಳಲು ಪ್ರಯತ್ನಿಸಿದರೂ ಅವರು ಲಭ್ಯವಾಗಲಿಲ್ಲ. ಅವರ ಶಾಪ್​ಗೆ ಹೋದಾಗ ಸಿಗಲಿಲ್ಲ. ಫೋನ್ ಮಾಡಿದರೂ ಪ್ರಯೋಜನವಾಗಲಿಲ್ಲ. ಇನ್ನು ವಾಣಿ ಇರುವ ಮನೆಯ ನೆರೆಹೊರೆಯವರು ಸಹ ಮಹೇಶನ ಮೋಸದಾಟಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾರೆ. ಅವನಿಂದ ಈ ಮುಗ್ಧ ಮಹಿಳೆಗೆ ಅನ್ಯಾಯವಾಗಿದೆ. ಈಕೆಗೆ ಜೀವನಾಂಶ ಸಿಗುವಂತಾಗಬೇಕು. ಆಕೆಯ ಊರಿಗೆ ಹೋಗುವಂತೆ ಆಗಬೇಕು. ಇಲ್ಲಿ ನರಕದಲ್ಲಿ ಬದುಕುತ್ತಿದ್ದಾಳೆ. ಅದನ್ನು ನಮ್ಮಿಂದ ನೋಡಲು ಆಗುತ್ತಿಲ್ಲ ಎಂದು ನೆರೆಹೊರೆಯ ಜನರು ಮಮ್ಮಲ ಮರಗುತ್ತಾರೆ.

ಅಪ್ಪ, ಅವ್ವ ಇಲ್ಲದ ನನಗೆ ಜೀವನ ಕೊಡುತ್ತೇನೆಂದು ಸುಳ್ಳು ಹೇಳಿ ನನ್ನ ಜೀವನವನ್ನು ಹಾಳು ಮಾಡಿದ್ದಾನೆ ಮಹೇಶ. ನನ್ನನ್ನು ಇಲ್ಲಿ ಜೀವಂತ ಶವ ಮಾಡಿದ್ದಾನೆ. ಬದುಕು ಸಾಕಾಗಿದೆ. ನನಗೆ ಆಗಿರುವ ಮೋಸ ಯಾವ ಮಹಿಳೆಗೂ ಆಗಬಾರದು. ನನಗೆ ಅವನಿಂದ ಜೀವನಕ್ಕೆ ಅಗತ್ಯ ಪರಿಹಾರ ಸಿಗಬೇಕು. ಮಾಡಿರುವ ಅನ್ಯಾಯಕ್ಕೆ ಅವನಿಗೆ ಕಠಿಣ ಶಿಕ್ಷೆ ಆಗಬೇಕು.

| ವಾಣಿ ಶಹಾಪೂರ ನೊಂದ ಮಹಿಳೆ

ನವನಗರದ ಪಾಜಪೇಯಿ ಕಾಲನಿಯಲ್ಲಿ ವಾಣಿ ಎನ್ನುವ ಮಹಿಳೆಗೆ ಗಂಡನಿಂದ ಮೋಸ ಆಗಿದೆ ಎಂಬ ಮಾಹಿತಿ ಬಂದಿದೆ. ಈ ಹಿಂದೆ ಮಹಿಳಾ ಪೊಲೀಸ್ ಠಾಣೆಗೆ ಪ್ರಕರಣ ಬಂದಾಗ ನೊಂದ ಮಹಿಳೆ ದೂರು ದಾಖಲಿಸಿಲ್ಲ. ಇದೀಗ ಮತ್ತೊಮ್ಮೆ ನಮ್ಮ ಗಮನಕ್ಕೆ ಬಂದಿದ್ದರಿಂದ ಸೂಕ್ತ ಕಾನೂನಿನ ಕ್ರಮ ತೆಗೆದುಕೊಳ್ಳಲಾಗುವುದು.

| ಲೋಕೇಶ ಜಗಲಾಸರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬಾಗಲಕೋಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net