

ಕಲಬುರಗಿ: ಈಗ ಎಲ್ಲೆಡೆ ಲಾಕ್ಡೌನ್ ಜಾರಿಯಲ್ಲಿರುವುದರಿಂದ, ಕೋವಿಡ್ ನಿಯಂತ್ರಣಕ್ಕಾಗಿ ಹಲವಾರು ಮಾರ್ಗಸೂಚಿಗಳನ್ನೂ ವಿಧಿಸಲಾಗಿರುವುದರಿಂದ ರಸ್ತೆಯಲ್ಲಿ ಓಡಾಡುವವರನ್ನು ಪೊಲೀಸರು ಅಡ್ಡಗಟ್ಟಿ ಸೂಕ್ತ ಕಾರಣ ಕೇಳುವುದು, ತಪಾಸಣೆ ನಡೆಸುವುದು ಹೊಸದೇನಲ್ಲ. ಅದೇ ರೀತಿ ಕರ್ತವ್ಯದಲ್ಲಿದ್ದ ಮಹಿಳಾ ಎಎಸ್ಐ ಮೇಲೆ ಇಲ್ಲೊಬ್ಬ ಭೂಪ ಹಲ್ಲೆ ಮಾಡಿ ಈಗ ಕೇಸ್ ಜಡಿಸಿಕೊಂಡಿದ್ದಾನೆ.
ಕಲಬುರಗಿ ರಾಷ್ಟ್ರಪತಿ ವೃತ್ತದ ಬಳಿ ಈ ಘಟನೆ ನಡೆದಿದೆ. ಕಲಬುರಗಿಯ ಜೋಗೂರು ನಿವಾಸಿ ಮಹೇಶ್ ಹೂಗಾರ್ ಎಂಬಾತ ಇಲ್ಲಿನ ಅಶೋಕನಗರ ಪೊಲೀಸ್ ಠಾಣೆಯ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಸುಮಂಗಲಾ ಎಂಬವರ ಮೇಲೆ ಹಲ್ಲೆ ಮಾಡಿದ್ದಾನೆ.
ದ್ವಿಚಕ್ರವಾಹನದಲ್ಲಿ ಬರುತ್ತಿದ್ದ ಮಹೇಶ್ನನ್ನು ಗಾಡಿ ನಿಲ್ಲಿಸುವಂತೆ ಅಡ್ಡಗಟ್ಟಿದ ಎಎಸ್ಐ, ಮಾಸ್ಕ್ ಎಲ್ಲಿ ಎಂದು ಪ್ರಶ್ನಿಸಿದ್ದಲ್ಲದೆ ತಪಾಸಣೆಗಾಗಿ ದಾಖಲೆಗಳನ್ನು ತೋರಿಸುವಂತೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಉದ್ಧಟತನ ತೋರಿದ ಮಹೇಶ್, ಎಎಸ್ಐ ಮೇಲೆ ಹಲ್ಲೆ ಮಾಡಿದ್ದಾನೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಮಹೇಶ್ನನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿ ಕ್ರಮಕೈಗೊಂಡಿದ್ದಾರೆ.