

ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಅವರು ನಮ್ಮನ್ನು ಅಗಲಿ ಒಂದು ತಿಂಗಳಾಗಿದೆ. ಅವರ ನೆನಪಿನಲ್ಲಿ ಇಂದು(ಭಾನುವಾರ) ಫ್ರೀಡಂ ಪಾರ್ಕ್ನಿಂದ ಅಪ್ಪು ಸಮಾಧಿವರೆಗೂ ಬೈಕ್ ರೈಡ್ ನಡೆಸಲಾಯಿತು.
''ರೈಡ್ ಫಾರ್ ಅಪ್ಪು- ಯುವರತ್ನನಿಗೆ ಅರ್ಪಣೆ” ನಾಮಾಂಕಿತದಲ್ಲಿ ದ್ವಿಚಕ್ರ ಸಂಸ್ಥೆ ಮತ್ತು ಇಂಚರ ಸ್ಟುಡಿಯೋ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಚಾಲನೆ ನೀಡಿದರು. ಪುನೀತ್ ರಾಜ್ಕುಮಾರ್ ಅವರು ಅಭಿನಯದ ಜತೆಗೆ ಸಮಾಜಮುಖಿ ಕಾರ್ಯಕ್ರಮ ಮೂಲಕವೂ ಕೋಟ್ಯಂತರ ಜನರ ಮನಸ್ಸಲ್ಲಿ ಚಿರಾಯುವಾಗಿ ಉಳಿದಿದ್ದಾರೆ. ಪುನೀತ್ರ ಸಾಧನೆ ವಿದ್ಯಾರ್ಥಿ ಸಮುದಾಯ ಸೇರಿದಂತೆ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ. ಎಲ್ಲರಲ್ಲೂ ಸಮಾಜಪರ ಮನೋಭಾವ ಬೆಳೆಯಬೇಕು ಎಂದರು.
ರಸ್ತೆ ಸುರಕ್ಷತೆಯ ಜಾಹೀರಾತುವೊಂದರಲ್ಲಿ ಹೆಲ್ಮೆಟ್ ಧರಿಸುವಿಕೆಯ ಮಹತ್ವ ಕುರಿತು ಬೈಕ್ ಸವಾರರಿಗೆ ಪುನೀತ್ ರಾಜ್ಕುಮಾರ್ ನೀಡಿದ್ದ ಸಂದೇಶದ ಬಗ್ಗೆ ಇದೇ ವೇಳೆ ಸ್ಮರಿಸಲಾಯಿತು. ಸಚಿವ ಅಶ್ವತ್ಥ ನಾರಾಯಣ ಕೂಡ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸುವ ಮೂಲಕವೇ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 200ಕ್ಕೂ ಹೆಚ್ಚು ಜನರು ಬೈಕ್ ರೈಡ್ನಲ್ಲಿ ಪಾಲ್ಗೊಂಡಿದ್ದರು. ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸಿದ್ದರು. ಎಲ್ಲರಿಗೂ ಟೀ-ಶರ್ಟ್, ಬ್ಯಾಡ್ಜ್, ಸರ್ಟಿಫಿಕೇಟ್, ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಫ್ರೀಡಂ ಪಾರ್ಕ್ನಿಂದ ಹೊರಟ ಬೈಕ್ ರ್ಯಾಲಿ ಅಪ್ಪು ಸಮಾಧಿವರೆಗೆ ತಲುಪಿತು. ಬಳಿಕ ಅಪ್ಪು ಸಮಾಧಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.