

ತುಮಕೂರು: ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋದ ಬೈಕ್ ಸವಾರರಿಬ್ಬರು ಕ್ಷಣಾರ್ಧದಲ್ಲೇ ದುರಂತ ಅಂತ್ಯ ಕಂಡ ದುರ್ಘಟನೆ ತಿಪಟೂರು ತಾಲೂಕು ಬಳುವನೇರಳು ಗೇಟ್ ಬಳಿ ಬುಧವಾರ ಮಧ್ಯಾಹ್ನ 12ರ ಸುಮಾರಿನಲ್ಲಿ ಸಂಭವಿಸಿದೆ.
ನಾಗರಾಜು(60) ಮತ್ತು ಚಿದಾನಂದ(45) ಮೃತರು. ಬಳುವನೇರಳು ಗೇಟ್ ಬಳಿ ಹೊನ್ನವಳ್ಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ನಾಗರಾಜು ಮತ್ತು ಚಿದಾನಂದ ಇಬ್ಬರೂ ಬೈಕ್ನಲ್ಲಿ ತಿಪಟೂರಿನತ್ತ ತೆರಳುತ್ತಿದ್ದರು. ಮುಂದೆ ಪೊಲೀಸರು ಇರುವುದನ್ನ ನೋಡಿದ ಇವರಿಬ್ಬರೂ ಹೆದರಿ ಬೈಕ್ ಅನ್ನು ಬೇರೆಡೆಗೆ ತಿರುಗಿಸಿದ್ದು, ಈ ವೇಳೆ ಎದುರಿಗೆ ಬರುತ್ತಿದ್ದ ಬುಲೆರೋ ಜೀಪ್ಗೆ ಬೈಕ್ ಡಿಕ್ಕಿಯಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಗಂಭೀರ ಗಾಯಗೊಂಡ ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳದಲ್ಲಿ ನೂರಾರು ಜನ ಜಮಾಯಿಸಿದ್ದು, ಈ ಘಟನೆಗೆ ಪೊಲೀಸರೇ ಕಾರಣ ಎಂದು ಆರೋಪಿಸಿದ್ದಾರೆ.(ದಿಗ್ವಿಜಯ ನ್ಯೂಸ್)