

ಬೆಂಗಳೂರು: ಕಳೆದ ತಿಂಗಳಷ್ಟೇ ಪ್ರಾರಂಭವಾಗಿದ್ದ ‘ಬಿಗ್ ಬಾಸ್ ಓಟಿಟಿ ಕನ್ನಡ’ದ ಮೊದಲ ಸೀಸನ್ ಈಗ ಮುಕ್ತಾಯದ ಹಂತಕ್ಕೆ ಬಂದಿದೆ. ಈ ವಾರಾಂತ್ಯ ಕಾರ್ಯಕ್ರಮ ಮುಕ್ತಾಯವಾಗಲಿದ್ದು, ಒಂದು ವಾರದ ಗ್ಯಾಪ್ನ ನಂತರ, ಅಂದರೆ ಸೆ. 25ರಿಂದ ‘ಬಿಗ್ ಬಾಸ್’ನ ಒಂಬತ್ತನೇ ಸೀಸನ್ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.
ಸದ್ಯ ಪ್ರಸಾರವಾಗುತ್ತಿರುವ ‘ಬಿಗ್ ಬಾಸ್ ಓಟಿಟಿ ಕನ್ನಡ’ದ ಮೊದಲ ಸೀಸನ್ ವೂಟ್ ಸೆಲೆಕ್ಟ್ನಲ್ಲಿ 24 ತಾಸುಗಳ ಕಾಲ ಪ್ರಸಾರವಾಗುತ್ತಿದೆ. ಇನ್ನು, ವಾರಾಂತ್ಯದ ಕಾರ್ಯಕ್ರಮವನ್ನು ಸುದೀಪ್ ನಡೆಸಿಕೊಡುತ್ತಿದ್ದಾರೆ. ಈ ಬಾರಿ ಬೇರೆಬೇರೆ ಕ್ಷೇತ್ರಗಳ ಸೆಲೆಬ್ರಿಟಿಗಳ ಜತೆಗೆ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗಿರುವ ಸೋನು ಶ್ರೀನಿವಾಸ ಗೌಡ, ಸ್ಪೂರ್ತಿ ಗೌಡ, ಕಿರಣ್ ಯೋಗೇಶ್ವರ್, ಲೋಕೇಶ್, ಉದಯ್ ಸೂರ್ಯ, ಅಕ್ಷತಾ ಕುಕ್ಕಿ, ಜಶ್ವಂತ್-ನಂದು ಮತ್ತು ಜಯಶ್ರೀ ಆರಾಧ್ಯ ಸ್ಪರ್ಧಿಗಳಾಗಿ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಪೈಕಿ ಕೆಲವರು ‘ಬಿಗ್ ಬಾಸ್’ನ 9ನೇ ಸೀಸನ್ನಲ್ಲೂ ಭಾಗವಹಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳ ಸೆಲೆಬ್ರಿಟಿಗಳ ಜತೆಗೆ ಇದುವರೆಗೂ ನಡೆದ ಎಂಟು ಸೀಸನ್ಗಳಲ್ಲಿ ಭಾಗವಹಿಸಿದ್ದ ಕೆಲವು ಪ್ರಮುಖ ಸ್ಪರ್ಧಿಗಳು ಸಹ ಈ ಹೊಸ ಸೀಸನ್ನಲ್ಲಿ ಭಾಗವಹಿಸುತ್ತಿರುವುದು ವಿಶೇಷ. ಇವರ ಜತೆಗೆ ಈ ಬಾರಿ ಇನ್ನೊಂದಿಷ್ಟು ಹೊಸ ಸ್ಪರ್ಧಿಗಳು ಸೇರಿಕೊಳ್ಳಲಿದ್ದಾರೆ. ಒಟ್ಟಾರೆ ‘ಬಿಗ್ ಬಾಸ್- 9’, ಹಳಬರು ಮತ್ತು ಹೊಸಬರ ಸಮ್ಮಿಲನವಾಗಲಿದೆ.
ಸದ್ಯ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಯಾರ್ಯಾರು ಭಾಗವಹಿಸಬಹುದು ಎಂಬ ಚರ್ಚೆ ಈಗಾಗಲೇ ಶುರುವಾಗಿದೆ. ಈ ಪೈಕಿ, ಇತ್ತೀಚೆಷ್ಟೇ ‘ಜೊತೆಜೊತೆಯಲಿ’ ಧಾರಾವಾಹಿಯಿಂದ ಹೊರಬಂದ ನಟ ಅನಿರುದ್ಧ, ‘ಕಮಲಿ’ ಧಾರಾವಾಹಿಯ ಅಮೂಲ್ಯ ಓಂಕಾರ್ ಗೌಡ ಮುಂತಾದವರು ಹೆಸರುಗಳು ಕೇಳಿಬರುತ್ತಿದೆ. ‘ಬಿಗ್ ಬಾಸ್ - 9’ರ ವಾರಾಂತ್ಯದ ಕಾರ್ಯಕ್ರಮವನ್ನು ಸುದೀಪ್ ಎಂದಿನಂತೆ ನಡೆಸಿಕೊಡಲಿದ್ದಾರೆ.