

ಬೆಂಗಳೂರು: ಭಾರತಿ ಶೆಟ್ಟಿಗೆ ಒನಕೆ ಓಬವ್ವನ ಪಾತ್ರ ನೀಡಿ ಹೊಸದಾಗಿ ಸಿನಿಮಾ ಮಾಡಬೇಕು ಎಂಬ ವಿಷಯ ಪ್ರಸ್ತಾಪವಾಗಿ ಮೇಲ್ಮನೆಯಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು.
ಬಜೆಟ್ ಕುರಿತು ಚರ್ಚೆ ಮಾಡುತ್ತಿದ್ದ ಭಾರತಿ ಶೆಟ್ಟಿ ಅವರು ವೀರ ರಾಣಿಯರಾದ ಅಬ್ಬಕ್ಕ, ಕೆಳದಿ ಚನ್ನಮ್ಮ, ಒನಕೆ ಓಬವ್ವ ಪ್ರತಿಮೆಗಳನ್ನು ಸ್ಥಾಪಿಸಿ, ಮುಂದಿನ ಪೀಳಿಗೆಗೆ ಅವರ ಶೌರ್ಯ, ದಿಟ್ಟ ಹೋರಾಟಗಳ ಬಗ್ಗೆ ತಿಳಿಸಿಕೊಡಬೇಕಾಗಿದೆ ಎಂದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಧ್ವನಿಗೂಡಿಸಿದರೆ, ಎನ್.ರವಿಕುಮಾರ್ ಅವರು ಚಿತ್ರದುರ್ಗದಲ್ಲಿ ಒನಕೆ ಓಬವ್ವಳ 50 ಅಡಿ ಎತ್ತರದ ಪ್ರತಿಮೆ ಸ್ಥಾಪಿಸಬೇಕಾಗಿದೆ ಎಂದಾಗ ಸಭಾಪತಿ ಪೀಠದಲ್ಲಿದ್ದ ತೇಜಸ್ವಿನಿ ಸಹಮತ ವ್ಯಕ್ತಪಡಿಸಿದರು.
ಈ ನಡುವೆ ಬಿಜೆಪಿ ಶಶಿಲ್ ನಮೋಶಿ ಅವರು ಭಾರತಿಶೆಟ್ಟಿಗೆ ಒನಕೆ ಓಬವ್ವನ ಪಾತ್ರ ನೀಡಿ ಹೊಸದಾಗಿ ಸಿನಿಮಾ ಮಾಡಬೇಕಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ತೇಜಸ್ವಿನಿಗೌಡ, ಅಭಿನಯಶಾರದೆ ಜಯಂತಿ ಆ ಪಾತ್ರಕ್ಕೆ ಜೀವ ತುಂಬಿದ್ದು. ಬೇರೆ ಯಾರಿಂದಲೂ ಸಾಧ್ಯವಾಗದು ಎಂದರು.
ತಟ್ಟನೆ ಎದ್ದುನಿಂತ ಮಾಧುಸ್ವಾಮಿ, ಅವರು ಇನ್ನೂ ಸಿನಿಮಾ ಮಾಡಬೇಕೆಂದಿದ್ದಾರಷ್ಟೇ ಅಷ್ಟರಲ್ಲಾಗಲೆ ಆಕ್ಷೇಪ ಬಂತು ನೋಡಿ ಎನ್ನುತ್ತಾ ಸಭಾಪತಿ ಪೀಠದಲ್ಲಿದ್ದ ತೇಜಸ್ವಿನಿಗೌಡರತ್ತ ನಗೆ ಚಟಾಕಿ ಹಾರಿಸಿದರು.
ಜೆಡಿಎಸ್ನ ಮರಿತಿಬ್ಬೇಗೌಡರು, ಎರಡು ಜಡೆ ಒಂದಾಗುವುದು ಕಷ್ಟ ಅನ್ನೋ ಮಾತಿದೆ ಎಂದು ನಗುತ್ತಲೇ ಹೇಳಿದರು. ಪುರುಷರು ಹೊರಗೆ ಹುಲಿ, ಮನೆಯೊಳಗೆ ಇಲಿ ಎಂದು ಬಿಜೆಪಿಯ ಎಂ.ಕೆ.ಪ್ರಾಣೇಶ್ ಧ್ವನಿ ಸೇರಿಸಿದರು.
ಹೀಗೆ ಉಬ್ಬಿಸಿದರೆ ನಾವೇನೂ ಉಬ್ಬುವುದಿಲ್ಲ, ನಮಗೆ (ಮಹಿಳೆಯರು) ಶೇ.50 ರಾಜಕೀಯ ಮೀಸಲು ಸಿಗುವ ತನಕ ಪ್ರಯತ್ನ ನಿಲ್ಲಿಸುವುದಿಲ್ಲ ಎಂದು ತೇಜಸ್ವಿನಿಗೌಡ ನಗುತ್ತಲೇ ಹೇಳಿ ಚರ್ಚೆಗೆ ತೆರೆ ಎಳೆದರು. ಅಂದಹಾಗೆ ಈ ಸ್ವಾರಸ್ಯಕರ ಚರ್ಚೆ ನಡೆದದ್ದು ಗುರುವಾರ.