

ಕೈಲಾಂಚ : ಸಮಾಜದಲ್ಲಿ ಮಹಿಳೆಯರಿಗೆ ಉತ್ತಮ ಸ್ಥಾನ ಗೌರವ ದೊರೆಯುತ್ತಿದೆ ಎಂದು ವಿಭೂತಿಕೆರೆ ಗ್ರಾಪಂ ಅಧ್ಯಕ್ಷೆ ಸುನೀತಾ ನಾಗರಾಜ್‌ಸಿಂಗ್ ತಿಳಿಸಿದರು.
ಕೈಲಾಂಚ ಹೋಬಳಿಯ ವಿಭೂತಿಕೆರೆ ಗ್ರಾಪಂ ಆವರಣದಲ್ಲಿ ಗುರುವಾರ ಮಹಿಳಾ ಕಾಯಕೋತ್ಸವ ಮತ್ತು ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಗ್ರಾಪಂ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಗೆ ಸನ್ಮಾನಿಸಿ ಮಾತನಾಡಿದರು.
ಸಮಾಜವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕಾದ ಜವಾಬ್ದಾರಿಯನ್ನು ಇಂದಿನ ಮಹಿಳೆ ಹೊತ್ತಿದ್ದಾರೆ. ಎಲ್ಲ ರಂಗದಲ್ಲೂ ಮಹಿಳೆಯರು ಪಾದಾರ್ಪಣೆ ಮಾಡಿದ್ದಾರೆ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳೂ ಮಹಿಳೆಯರಿಗೆ ವಿಶೇಷ ಸ್ಥಾನಮಾನ ನೀಡಿ ಅವರಿಗೆ ಗೌರವ ನೀಡುತ್ತಿವೆ ಎಂದರು.
ಸಮುದಾಯ ಮತ್ತು ಸಮಾಜದ ಕಡೆ ನಮ್ಮ ಗಮನ ಇರಬೇಕು. ಮಕ್ಕಳ, ಕುಟುಂಬದ ಪಾಲನೆ ಪೋಷಣೆ ಜತೆಯಲ್ಲಿ ಸ್ವಚ್ಛತೆ ಕಡೆ ಪ್ರಮುಖ ಆಧ್ಯತೆ ನೀಡಿ ಪ್ಲಾಸ್ಟಿಕ್ ಅಗತ್ಯಕ್ಕಿಂತ ಹೆಚ್ಚಿಗೆ ಬಳಸಲು ಮುಂದಾಗುವುದು ಬೇಡ. ಖಾಲಿ ಜಾಗಗಳಲ್ಲಿ ಗಿಡ ನೆಡುವುದನ್ನು ರೂಢಿಮಾಡಿಕೊಂಡು ಸುಂದರ ಪರಿಸರ ಸುಂದರ ಸಮಾಜ ನಿರ್ಮಾಣ ನಮ್ಮಗಳ ಗುರಿಯಾಗಬೇಕು ಎಂದು ತಿಳಿಸಿದರು.
ಪಿಡಿಒ ಬಿ.ಕೆ. ಗೋಮತಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಹೆಣ್ಣು ಜ್ಞಾನವಂತೆಯಾದರೆ ಮಾತ್ರ ಪ್ರತಿಯೊಂದು ಕುಟುಂಬ ಯಶಸ್ವಿಯಾಗಿ ನಡೆಯಲಿದೆ. ಸಮಯೋಚಿತವಾಗಿ ಬುದ್ದಿಯನ್ನು ಪ್ರಯೋಗಿಸುವುದು ಜ್ಞಾನ ಇದನ್ನು ಸಾಮಾಜಿಕವಾಗಿ ಬಳಕೆ ಮಾಡಿಕೊಳ್ಳಬೇಕು. ಗ್ರಾಪಂನಲ್ಲಿ ಮಹಿಳಾ ಅಧಿಕಾರಿ ಸಿಬ್ಬಂದಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿಗೆ ಪೂರಕವಾಗಿ ನಮ್ಮೊಡನೆ ಜನಪ್ರತಿನಿಧಿಗಳು, ಗ್ರಾಮಸ್ಥರು ಉತ್ತಮ ಸ್ಪಂಧನೆ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.
ಪಿಡಿಒ ಬಿ.ಕೆ ಗೋಮತಿ ಮತ್ತು ಗ್ರಾಪಂನ ತ್ಯಾಜ್ಯ ವಿಲೇವಾರಿ ಸ್ವಚ್ಛತಾಗಾರರಾದ ಅಮೂಲ್ಯ, ಪುಟ್ಟಸಿದ್ದಮ್ಮ, ಲಕ್ಷ್ಷ್ಮಮ್ಮ, ಇವರಿಗೆ ಗ್ರಾಪಂ ವತಿಯಿಂದ ಸನ್ಮಾನಿಸಲಾಯಿತು.
ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಮತ್ತು ಸಮುದಾಯ ಸದಸ್ಯರಿಗೆ ಡಿಜಿಟಲ್ ಸಾಕ್ಷರತೆ ಬಗ್ಗೆ ಡಿಜಿ ವಿಕಾಸನ ಸಂಸ್ಥೆಯ ಜಿಲ್ಲಾ ಸಂಯೋಜಕ ಯೋಗೇಶ್ ತರಬೇತಿ ನೀಡಿದರು.
ಗ್ರಾಪಂ ಉಪಾಧ್ಯಕ್ಷೆ ಮಂಗಳಗೌರಮ್ಮ, ಸದಸ್ಯೆ ಮಹದೇವಮ್ಮ, ಎನ್‌ಆರ್‌ಎಲ್‌ಎಂ ಟಿಪಿಎಂ ವಿಜಯಲಕ್ಷ್ಮೀ, ವಲಯ ಮೇಲ್ವೀಚಾರಕಿ ಅರ್ಪಿತಾ, ಎಂಬಿಕೆ ಸುಧಾರಾಣಿ ಡಿಜಿ ವಿಕಸನ ಸಂಸ್ಥೆಯ ಜಿಲ್ಲಾ ಸಂಯೋಜಕ ಯೋಗೇಶ್, ಕಾರ್ಯದರ್ಶಿ ಪದ್ಮಯ್ಯ, ಬಿಲ್ ಕಲೆಕ್ಟರ್ ರೇವುಮಲ್ಲೇಶ್, ಎಸ್‌ಡಿಎ ಸುಜಾತಾ ಇದ್ದರು.