ಬೆಂಗ್ಳೂರಲ್ಲಿ ನಿಗೂಢ ಪ್ರಕರಣ: ಆತ್ಮಗಳ ಜತೆ ಮಾತಾಡ್ತೇನೆಂದು ಮನೆ ತೊರೆದಿದ್ದ ಬಾಲಕಿ ಎರಡೂವರೆ ತಿಂಗಳ ಬಳಿಕ ಪತ್ತೆ!

Minor-Girl
Published on

ಬೆಂಗಳೂರು: ಆತ್ಮಗಳ ಜತೆಗೆ ಮಾತನಾಡುವುದಾಗಿ ಮನೆ ಬಿಟ್ಟು ಹೋಗಿದ್ದ 17 ವರ್ಷದ ಅನುಷ್ಕಾ ಎರಡೂವರೆ ತಿಂಗಳ ಬಳಿಕ ಗುಜರಾತ್​ನ ಸೂರತ್​ನಲ್ಲಿರುವ ಅನಾಥಾಶ್ರಮದಲ್ಲಿ ಪತ್ತೆಯಾಗಿದ್ದಾಳೆ. ಬಾಲಕಿಯನ್ನು ಪತ್ತೆಹಚ್ಚಿದ ಸುಬ್ರಹ್ಮಣ್ಯನಗರ ಪೊಲೀಸರು ಗುಜರಾತ್​ನಿಂದ ಬಾಲಕಿಯನ್ನು ಬೆಂಗಳೂರಿಗೆ ಕರೆ ತಂದು ಪಾಲಕರ ವಶಕ್ಕೆ ಒಪ್ಪಿಸಿದ್ದಾರೆ.

2021ರ ಅ.31ರಂದು ಸುಬ್ರಹ್ಮಣ್ಯನಗರದ ನಿವಾಸಿ ಅನುಷ್ಕಾ ಮನೆ ಬಿಟ್ಟು ರೈಲಿನಲ್ಲಿ ಬೆಂಗಳೂರಿನಿಂದ ಗುಜರಾತ್​ನ ಸೂರತ್​ಗೆ ಹೋಗಿದ್ದಳು. ಆಕೆ ಎಲ್ಲಿದ್ದಾಳೆ ಎಂದು ಗೊತ್ತಿರದ ಪಾಳಕರು ಆತಂಕಗೊಂದು ಸುಬ್ರಹ್ಮಣ್ಯನಗರ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಅನುಷ್ಕಾಳ ಹಿನ್ನೆಲೆ ಬಗ್ಗೆ ವಿಚಾರಿಸಿದಾಗ ಆಕೆ 'ಶಮಾನಿಸಂ'ಗೆ (ಆತ್ಮಗಳೊಂದಿಗೆ ಮಾತನಾಡುವುದು) ಆಕರ್ಷಿತಳಾಗಿರುವ ಸಂಗತಿ ಬೆಳಕಿಗೆ ಬಂದಿತ್ತು. ಪಾಲಕರು ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ನೊಂದು ಮನೆಯಿಂದ ಹೋಗಿರಬಹುದು ಎನ್ನಲಾಗಿತ್ತು.

ಬೆಂಗಳೂರಿಂದ ನಾಪತ್ತೆಯಾದ ಅನುಷ್ಕಾ, ಸೂರತ್​ನ ಆಶ್ರಮವೊಂದರಲ್ಲಿ ಆಶ್ರಯ ಪಡೆದಿದ್ದಳು. ಇತ್ತೀಚೆಗೆ ಪಾಲಕರ ನೆನಪಾಗಿ ಜ.15ರಂದು ಅವರಿಗೆ ಕರೆ ಮಾಡಿ ಕಷ್ಟ-ಸುಖ ವಿಚಾರಿಸಿ, ತಾನು ಆಶ್ರಮದಲ್ಲಿ ನೆಲೆಸಿರುವ ಬಗ್ಗೆ ಮಾಹಿತಿ ನೀಡಿದ್ದಳು. ಪಾಲಕರು ಈ ವಿಚಾರವನ್ನು ಪೊಲೀಸರ ಗಮನಕ್ಕೆ ತಂದಿದ್ದರು. ಸುಬ್ರಹ್ಮಣ್ಯನಗರ ಪೊಲೀಸರ ತಂಡ ಸೂರತ್​ನ ಆಶ್ರಮಕ್ಕೆ ತೆರಳಿ ಬಾಲಕಿಯನ್ನು ಬೆಂಗಳೂರಿಗೆ ಕರೆತಂದು ಪಾಲಕರಿಗೆ ಹಸ್ತಾಂತರಿಸಿದ್ದಾರೆ.

ತನ್ನಿಷ್ಟದ ಕಾಲೇಜಿಗೆ ಸೇರಿಸದ್ದಕ್ಕೆ ಕೋಪ: ಅನುಷ್ಕಾ ದ್ವಿತೀಯ ಪಿಯುಸಿ ಮುಗಿಸಿದ್ದು, ನಗರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಡಿಗ್ರಿ ವ್ಯಾಸಂಗ ಮಾಡಬೇಕೆಂದು ಪಾಲಕರ ಬಳಿ ಹೇಳಿಕೊಂಡಿದ್ದಳು. ಆದರೆ, ಪಾಲಕರು ಆ ಕಾಲೇಜಿನಲ್ಲಿ ವ್ಯಾಸಂಗ ಮಾಡುವುದು ಬೇಡ, ಬೇರೆ ಕಾಲೇಜಿಗೆ ಸೇರಿಸುವುದಾಗಿ ಹೇಳಿದ್ದರು. ಇದರಿಂದ ನೊಂದು ಮನೆ ಬಿಟ್ಟು ಹೋಗಿರುವುದಾಗಿ ಅನುಷ್ಕಾ ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಅನುಷ್ಕಾ 'ಶಮಾನಿಸಂ'ಗೆ (ಆತ್ಮಗಳೊಂದಿಗೆ ಮಾತನಾಡುವುದು) ಆಕಷಿರ್ತಳಾಗಿರುವುದು ನಿಜ. ಆದರೆ, ಇದಕ್ಕಾಗಿ ಆಕೆ ಮನೆ ಬಿಟ್ಟು ಹೋಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net