ಧರ್ಮಸ್ಥಳದಲ್ಲಿ ಹಾಲಪ್ಪ-ಬೇಳೂರು ಮುಖಾಮುಖಿ ಆಣೆ-ಪ್ರಮಾಣ ಮಾಡ್ಲಿಲ್ಲ… ಪ್ರತ್ಯೇಕವಾಗಿ ಪ್ರಾರ್ಥನೆ ಸಲ್ಲಿಕೆ, ಹಾಲಪ್ಪರಿಂದ ಪ್ರಮಾಣ

halappa beluru
Published on

ಬೆಳ್ತಂಗಡಿ (ದಕ್ಷಿಣ ಕನ್ನಡ): ಮರಳು ದಂಧೆಕೋರರಿಂದ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದ್ದಂತೆ ಶಾಸಕ ಹರತಾಳು ಹಾಲಪ್ಪ ಮತ್ತು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ನಡುವಿನ ಕಿತ್ತಾಟ ಶ್ರೀಕ್ಷೇತ್ರ ಧರ್ಮಸ್ಥಳದವರೆಗೂ ಶನಿವಾರ ತಲುಪಿತು.

ಶ್ರೀಕ್ಷೇತ್ರ ಧರ್ಮಸ್ಥಳದ ಆಣೆ-ಪ್ರಮಾಣ ಸಂಪ್ರದಾಯ ಪ್ರಕಾರ, ಇಬ್ಬರೂ ಮುಖಾಮುಖಿಯಾಗಿ ಪ್ರಮಾಣ ಮಾಡಬೇಕು. ಆದರೆ ಬೇಳೂರು ಮತ್ತು ಹಾಲಪ್ಪ ಶನಿವಾರ ಮುಖಾಮುಖಿಯಾಗದೆ, ಪ್ರತ್ಯೇಕವಾಗಿ ಪ್ರಾರ್ಥನೆ ಸಲ್ಲಿಸಿ ಮರಳಿದ್ದಾರೆ.

ಸಾಗರ ಮತ್ತು ಹೊಸನಗರ ತಾಲೂಕಿನಲ್ಲಿ ಮರಳುಗಾರಿಕೆ ಮಾಡುವವರಿಂದ ಲಂಚ ಸ್ವೀಕಾರ ಆರೋಪ ಹಿನ್ನೆಲೆಯಲ್ಲಿ ಹರತಾಳು ಹಾಲಪ್ಪ ಮತ್ತು ಬೇಳೂರು ಗೋಪಾಲಕೃಷ್ಣ ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದರು. ಬೇಳೂರು ಗೋಪಾಲಕೃಷ್ಣ ಆಗಮನಕ್ಕಿಂತ ಮೊದಲೇ ಹಾಲಪ್ಪ ಧರ್ಮಸ್ಥಳದಿಂದ ನಿರ್ಗಮಿಸಿದ್ದರು. ಆದುದರಿಂದ ಇಬ್ಬರ ಮುಖಾಮುಖಿ ಆಗಿಲ್ಲ. ಇಬ್ಬರೂ ಪ್ರತ್ಯೇಕವಾಗಿ ಪ್ರಾರ್ಥನೆ ಸಲ್ಲಿಸಿ ಮರಳಿದರು.

ಮರುಳು ಸಾಗಣೆ ಲಾರಿ ಮಾಲೀಕರಿಂದ ಹಣ ಪಡೆದಿಲ್ಲವೆಂದು ಪ್ರಮಾಣ ಮಾಡಿದ ಹಾಲಪ್ಪ ಅವರು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದರು. ಸದರಿ ವಿಷಯವನ್ನು ನಿವೇದಿಸಿ, ಆಶೀರ್ವಾದ ಪಡಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಹರತಾಳು ಹಾಲಪ್ಪ, ಲಂಚ ಸ್ವೀಕಾರ ಆರೋಪ ನಿಜವಲ್ಲ. ಹೀಗಾಗಿ ಸತ್ಯ ಮತ್ತು ಧರ್ಮ, ನ್ಯಾಯದಿಂದ ಶ್ರೀ ಮಂಜುನಾಥ ಸ್ವಾಮಿ ಮುಂದೆ ಪ್ರಾರ್ಥನೆ ಮಾಡಿದ್ದೇನೆ ಎಂದರು.

ಫೆ.12ರಂದು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡುವಂತೆ ಬೇಳೂರು ಗೋಪಾಲಕೃಷ್ಣ ಅವರಿಗೆ ತಿಳಿಸಿದ್ದೆ. 11ರಂದು ಮನೆಯಲ್ಲಿ ಖಾಸಗಿ ಕಾರ್ಯಕ್ರಮ, 13ರಂದು ಮತ್ತೆ ಕಾರ್ಯಕ್ರಮ, ಬಳಿಕ ಅಸೆಂಬ್ಲಿ ಅಧಿವೇಶನ ಇರುವುದರಿಂದ 12ರಂದು ದಿನ ನಿಗದಿಪಡಿಸಲು ಪತ್ರ ಬರೆದಿದ್ದೆ. ಗೋವಾ ಚುನಾವಣೆ ಪ್ರಚಾರ ಇದೆ ಎಂದು ಬೇಳೂರು ಅವರು ಆಣೆ ಪ್ರಮಾಣ ತಪ್ಪಿಸಲು ಯತ್ನಿಸುತ್ತಿದ್ದರು. ಅವರಿಗೆ ದೇವರ ಎದುರು ಆಣೆ ಮಾಡುವ ಧೈರ್ಯ ಇಲ್ಲ ಎಂಬುದು ಸಾಬೀತಾಗಿದೆ ಎಂದು ಹಾಲಪ್ಪ ಹೇಳಿದರು.

ಸಿಗಂದೂರು ದೇವಸ್ಥಾನದಲ್ಲಿ ನಂಬಿಕೆ ಇಲ್ಲದ ಕಾರಣ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬರುವಂತೆ ತಿಳಿಸಿದ್ದರು. ನಾನು ಧೈರ್ಯದಿಂದ ಬಂದು ಪ್ರಮಾಣ ಮಾಡಿದ್ದೇನೆ. ಹಣ ಪಡೆದಿದ್ದಾರೆಂದು ಆರೋಪಿಸಲಾಗಿರುವ ಕಾಲೇಜು ಸ್ನೇಹಿತ ವಿನಾಯಕ ರಾವ್​ ಮತ್ತು ಸಹೋದರ ಸಂಬಂಧಿ ರವೀಂದ್ರ ಅವರೂ ಪ್ರಮಾಣ ಮಾಡಿದ್ದಾರೆ ಎಂದು ಹಾಲಪ್ಪ ಹೇಳಿದರು. ವಿನಾಯಕ್ ರಾವ್, ಬಿ.ಟಿ ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.

ಮುಖಾಮುಖಿ ಪ್ರಮಾಣಕ್ಕೆ ಬೇಳೂರು ಸವಾಲ್​: ಇನ್ನೊಂದೆಡೆ, ಸುದ್ದಿಗಾರರೊಂದಿಗೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ನಾವು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬಂದಾಗ ಹರತಾಳು ಹಾಲಪ್ಪ ಅವರು ಬೆಳಗ್ಗೆಯೇ ಬೇಗ ಬಂದು ಹೋಗಿರುವ ಮಾಹಿತಿ ಲಭಿಸಿತು. ಅವರೇ ಸಮಯ ನಿಗದಿ ಪಡಿಸಿದ್ದರು. ಆದರೆ ನಮಗಿಂತ ಬೇಗ ಬಂದು ತೆರಳಿರುವ ಬಗ್ಗೆ ನಮಗೆ ಅನುಮಾನವಿದೆ. ಅವರು ಸವಾಲನ್ನು ಸ್ವೀಕರಿಸುವವರಾದರೆ ಮುಖಾಮುಖಿ ಪ್ರಮಾಣಕ್ಕೆ ಬರಲಿ ಎಂದು ಸವಾಲೆಸೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net