ಅರಬ್ಬಿ ಸಮುದ್ರ ತೀರದಲ್ಲಿ ದೇವರಿಗೆ ಸ್ನಾನ

13KWR1
Published on

ಕಾರವಾರ: ಮಾಘ ಕೃಷ್ಣ ಅಮಾವಾಸ್ಯೆಯ ಅಂಗವಾಗಿ ಮಾಜಾಳಿಯ ಅರಬ್ಬಿ ಸಮುದ್ರ ತೀರದಲ್ಲಿ ಶನಿವಾರ ವಿವಿಧ ದೇವಸ್ಥಾನಗಳ ದೇವರ ಮೂರ್ತಿಗಳನ್ನು ತಂದು ಸ್ನಾನ ಮಾಡಿಸಿ ಪೂಜೆ ಸಲ್ಲಿಸಲಾಯಿತು.

ಮಾಜಾಳಿ ರಾಮನಾಥ ದೇವರು ಹಾಗೂ ಮುಡಗೇರಿ, ಹೊಸಾಳಿ, ಅಸ್ನೋಟಿ,ಅಂಗಡಿ, ಸದಾಶಿವಡ ಸೇರಿ ಸುತ್ತಲಿನ ಏಳು ಹಳ್ಳಿಗಳ ದೇವರ ಮೂರ್ತಿಗಳನ್ನು ವಾದ್ಯ, ಛತ್ರ, ಚಾಮರಗಳೊಂದಿಗೆ ಪಲ್ಲಕ್ಕಿ ಮೆರವಣಿಗೆಯಲ್ಲಿ ತಂದು ಸಮುದ್ರ ಸ್ನಾನ ಮಾಡಿಸಲಾಯಿತು.

ಕಾರವಾರ ಹಾಗೂ ಗೋವಾದ ವಿವಿಧ ಊರುಗಳಿಂದ ಆಗಮಿಸಿದ ಸಾವಿರಾರು ಮಹಿಳೆಯರು, ಮಕ್ಕಳು, ವೃದ್ಧರು, ಯುವಕರು ಸಮುದ್ರ ಸ್ನಾನ ಮಾಡಿದರು. ಯುವಕರು ಮರಳಿನಲ್ಲಿ ಈಶ್ವರ ಲಿಂಗ ಮಾಡಿ ಪೂಜಿಸಿದರು. ಸಮುದ್ರದಲ್ಲಿ ಮಾನವ ಪಿರಮಿಡ್ ಮಾಡಿ ಖುಷಿಟ್ಟರು. ಪಲ್ಲಕ್ಕಿಯಲ್ಲಿ ಬಂದ ದೇವರಿಗೆ ಹಣ್ಣು ಕಾಯಿ ಒಡೆಸಿ ಪೂಜೆ ಸಲ್ಲಿಸಿದರು. ಕೆಲವರು ಪಿತೃ ಸಂತೃಪ್ತಿಗಾಗಿ ತರ್ಪಣ ಬಿಟ್ಟರು. ವಾಪಸಾಗುವಾಗ ದಾರಿಯಲ್ಲಿ ಅಕ್ಕಿ ಕಾಳು ಬೀರಿ ದೀನರಿಗೆ ಪಡಿ ಅರ್ಪಿಸಿದರು. ಒಟ್ಟಿನಲ್ಲಿ ಸಂಪೂರ್ಣ ಜಾತ್ರೆಯ ವಾತಾವರಣ ಅಲ್ಲಿತ್ತು.

ಪುಣ್ಯ ಪ್ರಾಪ್ತಿ: ಮಾಘ ಅಮಾವಾಸ್ಯೆಯ ದಿನ ಸಮುದ್ರ ಸ್ನಾನ ಮಾಡಿದರೆ ಮಾಡಿದ ಪಾಪಗಳೆಲ್ಲ ಕಳೆಯುತ್ತವೆ. ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಆಸ್ತಿಕರಲ್ಲಿದೆ. ಹಾಗಾಗಿ ಮಾಜಾಳಿ ಮಾತ್ರವಲ್ಲದೆ ಕಾರವಾರದ ಟ್ಯಾಗೋರ್ ಕಡಲ ತೀರ, ಕೋಡಿಬಾಗ, ದೇವಬಾಗ, ಸೇರಿ ವಿವಿಧೆಡೆ ಭಕ್ತರು ಸಮುದ್ರ ಸ್ನಾನ ಮಾಡಿ, ನಂತರ ದೀನರಿಗೆ ಅಕ್ಕಿಯ ಪಡಿ ನೀಡಿದರು. ಕಾರವಾರದ ಬಾಡ ಮಹಾದೇವ ದೇವಸ್ಥಾನದ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೋಡಿಬಾಗಕ್ಕೆ ಕೊಂಡೊಯ್ದು ಸಮುದ್ರ ಸ್ನಾನ ಮಾಡಿಸಲಾಯಿತು. ವಾಪಸ್ ಬರುವ ಸಂದರ್ಭದಲ್ಲಿ ಭಕ್ತರು ದಾರಿಯಲ್ಲಿ ರಂಗೋಲಿ ಹಾಕಿ ಪಲ್ಲಕ್ಕಿಯನ್ನು ಸ್ವಾಗತಿಸಿದರು. ಕರ್ಪರದಾರತಿ ಮಾಡಿ, ಪೂಜೆ ಸಲ್ಲಿಸಿದರು.

ದವಸ-ಧಾನ್ಯಗಳ ಪಡಿ ವಿತರಣೆ: ಮಹಾಶಿವರಾತ್ರಿ ಮಾಘ ಅಮಾವಾಸ್ಯೆ ನಿಮಿತ್ತ ಜಿಲ್ಲೆ ಮತ್ತು ಗ್ರಾಮಾಂತರದಿಂದ ಗೋಕರ್ಣಕ್ಕೆ ಆಗಮಿಸಿದ ಸಾವಿರಾರು ಶ್ರದ್ಧಾಳುಗಳು ಕ್ಷೇತ್ರ ಪದ್ಧತಿಯಂತೆ ಸಮುದ್ರ ತೀರದಲ್ಲಿ ಶನಿವಾರ ಬಡಬಗ್ಗರಿಗೆ ದವಸ ಧಾನ್ಯಗಳ ಪಡಿ ವಿತರಿಸಿದರು.

ಸಮುದ್ರ ಸ್ನಾನ ಮಾಡಿ ಪಿತೃಗಳಿಗೆ ಪುರೋಹಿತರ ದ್ವಾರಾ ಪಿಂಡ ಪ್ರದಾನ ಕೈಗೊಂಡರು. ಇದರಿಂದಾಗಿ ಶಿವರಾತ್ರಿ ದಿನ ಕಾಣದ ಜನ ದಟ್ಟಣೆ ಶನಿವಾರ ಊರಲ್ಲಿ ಕಂಡು ಬಂತು. ಕೋಟಿತೀರ್ಥ, ಸಮುದ್ರ ಮತ್ತು ಮಂದಿರಗಳಲ್ಲಿ ಬಹು ಸಂಖ್ಯೆಯಲ್ಲಿ ಜನರಿದ್ದರು. ಮಾ. 14ರಂದು ಮಧ್ಯಾಹ್ನ ರಥಬೀದಿಯಲ್ಲಿ ಮಹಾಬಲೇಶ್ವರ ಮಹಾರಥ ನಡೆಯಲಿದ್ದು, ಮಾ. 15ರಂದು ಒಂಬತ್ತು ದಿನದ ಮಹಾಶಿವರಾತ್ರಿ ಉತ್ಸವ ಮಂಗಳವಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net