ಅಧಿಕಾರಿಗಳ ವಿರುದ್ಧ ದೂರಿನ ಸುರಿಮಳೆ

10_HSN_07
Published on

ಆಲೂರು: ಆಲೂರು ಪಟ್ಟಣ ಒಕ್ಕಲಿಗರ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ಜನಸ್ಪಂದನ ಸಭೆಯಲ್ಲಿ ತಾಲೂಕಿನ ಸಾರ್ವಜನಿಕರು, ಸಂಘ-ಸಂಸ್ಥೆ ಪದಾಧಿಕಾರಿಗಳು ಅಧಿಕಾರಿಗಳ ವಿರುದ್ಧ ದೂರಿನ ಸುರಿಮಳೆಯನ್ನೇ ಸುರಿಸಿದರು. ಜನರ ಕೆಲಸ ಮಾಡಿಕೊಡದೆ ಜಡ್ಡುಗಟ್ಟಿ ಕುಳಿತಿದ್ದ ತಾಲೂಕು ಆಡಳಿತದ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ತೀವ್ರ ತರಾಟೆಗೆ ತೆಗೆದುಕೊಂಡರು.


ಸಾರ್ವಜನಿಕರಿಂದ ಸುಮಾರು 300ಕ್ಕೂ ಹೆಚ್ಚು ಅರ್ಜಿಗಳ ಅಹವಾಲು ಸ್ವೀಕರಿಸಿದ್ದು, 50ಕ್ಕೂ ಹೆಚ್ಚು ಅರ್ಜಿಗಳನ್ನು ಸ್ಥಳದಲ್ಲಿಯೇ ವಿಚಾರಣೆ ಮಾಡಿ ಸೂಕ್ತ ಮಾಹಿತಿ ಹಾಗೂ ಪರಿಹಾರ ನೀಡಿದರು. ಉಳಿದ ಅರ್ಜಿಗಳಿಗೆ 15 ದಿನಗಳೊಳಗೆ ಪರಿಹಾರ ನೀಡುವುದಾಗಿ ತಿಳಿಸಿದರು.


ಪಟ್ಟಣ ಪಂಚಾಯಿತಿ ಹಾಗೂ ಆಲೂರು ತಾಲೂಕಿನ 15 ಗ್ರಾಮ ಪಂಚಾಯಿತಿಯು ಡೆಂೆ ಜ್ವರದ ಬಗ್ಗೆ ಜಾಗೃತಿ ಮೂಡಿಸುವುದರ ಜತೆಗೆ ಚರಂಡಿ ಇನ್ನಿತರ ಸಾರ್ವಜನಿಕ ಸ್ಥಳಗಳನ್ನು ಶುಚಿಗೊಳಿಸಬೇಕು ಎಂದು ಪಿಡಿಒಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಡಾ.ಬಿ.ಆರ್. ಪೂರ್ಣಿಮಾ ಸೂಚನೆ ನೀಡಿದರು.
ಕಣತೂರು ಹೋಬಳಿ ಕೇಂದ್ರವನ್ನಾಗಿ ಮಾಡುವಂತೆ ಹಾಗೂ ಆಲೂರು ಪಟ್ಟಣದಲ್ಲಿ ಕೆಂಪೇಗೌಡರ ಸ್ಮಾರಕ ನಿರ್ಮಾಣ ಮಾಡಲು ಸೂಕ್ತ ಜಾಗ ಕಲ್ಪಿಸುವಂತೆ, ಪಟ್ಟಣದಲ್ಲಿ ಎಪಿಎಂಸಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬೇಕು ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಸ್.ಮಂಜೇಗೌಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.


ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ, ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಬೈರಾಪುರ ಗ್ರಾಮ ಪಂಚಾಯಿತಿಯಲ್ಲಿ 35 ಮನೆಗಳನ್ನು ಗೋಮಾಳದಲ್ಲಿ ನಿರ್ಮಾಣ ಮಾಡಿ, ಅಲಿನೇಷನ್ ಲೇಔಟ್ ಆಗಿದ್ದು, ಇ ಸ್ವತ್ತು ಪಡೆಯಲು ಆಗುತ್ತಿಲ್ಲ. ಕ್ರೀಡಾಂಗಣ ಸ್ವಚ್ಛತೆ, ರಾಜಪ್ಪ ಬಡಾವಣೆ ಕಸ ನಿರ್ವಹಣೆ, ಚರಂಡಿ ಸ್ವಚ್ಛತೆ ಸೇರಿದಂತೆ ಹಲವಾರು ಪ್ರಶ್ನೆಗಳು ಗ್ರಾಮಸ್ಥರಿಂದ ಕೇಳಿ ಬಂದ ಹಿನ್ನೆಲೆಯಲ್ಲಿ ಸರಿಪಡಿಸುವಂತೆ ಪಿಡಿಒ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸ್ಟೀಫನ್ ಪ್ರಕಾಶ್ ಅವರಿಗೆ ಸೂಚನೆ ನೀಡಿದರು.
ಕೆಇಬಿಗೆ ಸಂಬಂಧಿಸಿದಂತೆ ನಿರಂತರ ಜ್ಯೋತಿ 24 ಗಂಟೆ ವಿದ್ಯುತ್ ಪೂರೈಕೆ ಮಾಡುವಂತೆ, ಅಕ್ರಮ ಮದ್ಯ ಮಾರಾಟ, ಪಶು ವೈದ್ಯರ ಕೊರತೆ, ಮಗ್ಗೆ ಗ್ರಾಮದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಭವನ ಸ್ಥಾಪಿಸಲು 5 ಗುಂಟೆ ಜಾಗಕ್ಕೆ ಮನವಿ, ತೊಗರನಹಳ್ಳಿ ಗ್ರಾಮದಲ್ಲಿ ಡೇರಿ ನಿರ್ಮಾಣಕ್ಕೆ ಜಾಗ, ಬ್ಯಾಬ ಫಾರೆಸ್ಟ್ ಜಾಗವನ್ನು ದುರಸ್ತಿ ಮಾಡಿಕೊಡುವ ಬಗ್ಗೆ, ಕೆಎಸ್‌ಆರ್‌ಟಿಸಿ ಬಸ್ ಸಂಚಾರದ ತೊಂದರೆ ಸೇರಿದಂತೆ ನೂರಾರು ಸಮಸ್ಯೆಗಳನ್ನು ಮನವಿ ಮೂಲಕ ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತರಲಾಯಿತು.


ಶಾಸಕ ಸಿಮೆಂಟ್ ಮಂಜು ಮಾತನಾಡಿ, ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬಂದಿವೆ. ಕಂದಾಯ ಇಲಾಖೆಯ ಸಣ್ಣಪುಟ್ಟ ಸಮಸ್ಯೆಗಳಿಂದ ರೈತರು ಕಂಗಾಲಾಗಿದ್ದಾರೆ. ಇವರಿಗೆ ನ್ಯಾಯ ಒದಗಿಸಿಕೊಡಲು ಜಿಲ್ಲಾಧಿಕಾರಿ ಕೈ ಜೋಡಿಸಬೇಕು. ವಾಟೆಹೊಳೆ ನಾಲೆಗಳು ದುರಸ್ತಿಯಲ್ಲಿದ್ದು, ಕೆಲವು ಕಡೆ ಮುಚ್ಚಿ ಹೋಗಿರುವುದರಿಂದ ರೈತರಿಗೆ ನೀರಾವರಿ ಸಮಸ್ಯೆಗೆ ಕಾರಣವಾಗಿದೆ. ಇದೇ ವಿಷಯವಾಗಿ ಈ ಹಿಂದೆಯೂ ಸದನದಲ್ಲಿ ಚರ್ಚೆ ಮಾಡಿದ್ದೆ ಎಂದು ತಿಳಿಸಿದರು.


ಅಪರ ಜಿಲ್ಲಾಧಿಕಾರಿ ಶಕುಂತಲಾ, ಡಿವೈಎಸ್‌ಪಿ ಪ್ರಮೋದ್ ಕುಮಾರ್, ಉಪ ವಿಭಾಗಾಧಿಕಾರಿ ಶ್ರುತಿ, ಜಿಪಂ ಉಪ ಕಾರ್ಯದರ್ಶಿ ಚಂದ್ರಶೇಖರ್, ತಹಸೀಲ್ದಾರ್ ನಂದಕುಮಾರ್, ಡಿಡಿಎಲ್‌ಆರ್ ಸುಜಯ್, ಸಿಡಿಪಿಒ ಮಲ್ಲೇಶ್, ಜಿಪಂ ಲೆಕ್ಕಾಧಿಕಾರಿ ಸುದೈವ, ಇಒ ಶ್ರೀನಿವಾಸ್ ಸೇರಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net