ತುಳುವಿನಲ್ಲಿ ಬ್ಯಾನರ್ ಅಳವಡಿಸಿ ಶ್ರದ್ಧಾಂಜಲಿ!: ಕುಪ್ಪೆಪದವಿನಲ್ಲಿ ತ್ಯಾಜ್ಯ ಎಸೆಯುವವರಿಗೆ ಛೀಮಾರಿ

banner
ಕುಪ್ಪೆಪದವಿನ ಅರಮನೆ ಬಂಡಿ ರಸ್ತೆಯಲ್ಲಿ ತುಳು ಭಾಷೆಯಲ್ಲಿ ಬರೆದು ಹಾಕಲಾದ ಬ್ಯಾನರ್.
Published on

ಗುರುಪುರ: ಕುಪ್ಪೆಪದವಿನ ಅರಮನೆ ಬಂಡಿ ರಸ್ತೆಯಲ್ಲಿ ತ್ಯಾಜ್ಯ ಎಸೆಯುವವರಿಗೆ ವಿಶಿಷ್ಟ ರೀತಿಯಲ್ಲಿ ಛೀಮಾರಿ ಹಾಕಲಾದ ಒಂದು ವಿನೂತನ ಬ್ಯಾನರ್ ಕಂಡು ಬಂದಿದೆ.

ಎಲ್ಲೆಂದರಲ್ಲಿ ಕಸ ಎಸೆಯುವ ಮಂದಿಗೆ ಶ್ರದ್ಧಾಂಜಲಿ ಸಲ್ಲಿಸುವಂತೆ ತುಳು ಭಾಷೆಯಲ್ಲಿ ಬರೆಯಲಾದ ಬ್ಯಾನರ್ ಇದಾಗಿದೆ.‘ಇಲ್ಲಿ ಕಸ ಹಾಕುವವರ ಚಿತೆಗೆ ಬೆಂಕಿ ಇಡಲು ಇನ್ನೂ ಹೆಚ್ಚು ಕಸ ಬೇಕಾಗುತ್ತದೆ. ಇನ್ನೂ ಕಸ ತಂದು ಇಲ್ಲಿಯೇ ಹಾಕು. ಕಸದೊಂದಿಗೆ ನಿನಗೆ ಪಿಂಡವನ್ನೂ ಇಲ್ಲಿಯೇ ಬಿಡುತ್ತೇವೆ’ ಎಂಬಿತ್ಯಾದಿ ಒಕ್ಕಣೆಯಲ್ಲಿ ತುಳುವಿನಲ್ಲಿ ಬರೆಯಲಾಗಿದ್ದು, 100 ರೂ. ಕೊಟ್ಟು ಪಂಚಾಯಿತಿ ವಾಹನಕ್ಕೆ ಕಸ ನೀಡಲು ಸಾಧ್ಯವಿರದ ಭಿಕ್ಷುಕರಿಗೆ ಈ ಬರೆಹ ಅರ್ಪಣೆ ಎಂದೂ ಸೇರಿಸಲಾಗಿದೆ.

ಸಿಕ್ಕ ಸಿಕ್ಕಲ್ಲಿ ಕಸ ಎಸೆದು ಊರಿನ ಸೌಂದರ್ಯ ಹಾಳುಗೆಡಹುತ್ತಿರುವ, ನಾಗರಿಕ ಸಮಾಜದಲ್ಲಿ ಅನಾಗರಿಕರಂತೆ ವರ್ತಿಸುವ ಮಂದಿಗೆ ನಾಟುವಂತೆ ಬರೆದಿರುವ ಈ ಬ್ಯಾನರ್ ವಿಷಯದಲ್ಲಿ ಸ್ಥಳೀಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪರ ಮತ್ತು ಕಡಿಮೆ ವಿರೋಧ ಅಭಿಪ್ರಾಯಗಳು ಹರಿದಾಡಿವೆ.
ಸರ್ಕಾರ ಸ್ವಚ್ಛತೆಗೆ ಹಲವು ಯೋಜನೆ, ಅಭಿಯಾನ ಆರಂಭಿಸಿ ಕೋಟ್ಯಂತರ ರೂ. ವ್ಯಯಿಸುತ್ತಿದ್ದರೂ ರಸ್ತೆ ಬದಿಗಳಲ್ಲಿ, ಮೈದಾನಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವವರ ಸಂಖ್ಯೆ ಇಳಿಮುಖಗೊಂಡಿಲ್ಲ. ಇಂತಹ ಕಿಡಿಗೇಡಿಗಳನ್ನು ಕಟುವಾದ ಭಾಷೆಯಲ್ಲಿ ಎಚ್ಚರಿಸುವ ಸ್ಯಾಂಪಲ್ ಬ್ಯಾನರ್ ಇದಾಗಿದೆ ಎಂದು ಕೆಲವರ ಅಭಿಮತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net