

ಬೆಂಗಳೂರು: ಉದ್ಯಾನನಗರಿಯಲ್ಲಿ ಮಧ್ಯರಾತ್ರಿ 1 ಗಂಟೆವರೆಗೆ ಹೋಟೆಲ್ಗಳನ್ನು ತೆರೆಯಲು ಅನುಮತಿ ನೀಡಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ. 1 ಗಂಟೆವರೆಗೆ ವ್ಯಾಪಾರ ನಡೆಸಲು ಅನುಮತಿ ಇದ್ದರೂ ಪೊಲೀಸರು ರಾತ್ರಿ 10 ಗಂಟೆಗೆಲ್ಲ ಹೋಟೆಲ್ಗಳನ್ನು ಬಂದ್ ಮಾಡಿಸುತ್ತಿದ್ದರು. ಪೊಲೀಸರ ಕಿರಿಕಿರಿಗೆ ಇನ್ನುಮುಂದೆ ಬ್ರೇಕ್ ಬೀಳಲಿದೆ.
ಸಾರ್ವಜನಿಕ ಸ್ಥಳಗಳಲ್ಲಿ ತಿಂಡಿ ತಿನಿಸುಗಳನ್ನು ಒದಗಿಸುವ ಸ್ಥಳಗಳ ವ್ಯಾಪಾರದ ಅವಧಿಯನ್ನು ಬೆಳಗ್ಗೆ 6 ರಿಂದ ರಾತ್ರಿ 1 ಗಂಟೆವರೆಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ ಎಂದು ಪ್ರತಾಪ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಈ ವಿಚಾರವನ್ನು ತಮ್ಮ ಅಧಿಕಾರಿ ಮತ್ತು ಸಿಬ್ಬಂದಿಗೆ ತಿಳಿಸಿ ಹೋಟೆಲ್ಗಳಿಗೆ ತೊಂದರೆ ನೀಡದಂತೆ ನೋಡಿಕೊಳ್ಳುವಂತೆ ಡಿಸಿಪಿಗಳಿಗೆ ಆಯುಕ್ತರು ಸೂಚಿಸಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಎನ್.ಎಸ್.ಮೇರಿಕ್, 2016ರಲ್ಲಿ ನಗರ ವ್ಯಾಪ್ತಿ ರಾತ್ರಿ 1 ಗಂಟೆವರೆಗೆ ಹೋಟೆಲ್ಗಳನ್ನು ತೆರೆಯಲು ಅನುಮತಿ ನೀಡಿದ್ದರು. ಈ ಸಂಬಂಧ ರಾಜ್ಯ ಸರ್ಕಾರವು ಅಧಿಕೃತ ಆದೇಶ ಹೊರಡಿಸಿತ್ತು. ಅಲ್ಲದೆ ಸುನೀಲ್ ಕುಮಾರ್ ಅವರು ಆಯುಕ್ತರಾಗಿದ್ದಾಗ ಮೆಜೆಸ್ಟಿಕ್ ಹಾಗೂ ಮೈಸೂರು ರಸ್ತೆಯ ಸ್ಯಾಟ್ಲೈಟ್ ಬಸ್ ನಿಲ್ದಾಣಗಳಲ್ಲಿ 24 ತಾಸು ವಹಿವಾಟು ನಡೆಸಲು ಹೋಟೆಲ್ಗಳಿಗೆ ಅವಕಾಶ ನೀಡಿದ್ದರು. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ನಗರಕ್ಕೆ ಬರುವ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಮೆಜೆಸ್ಟಿಕ್ ಹಾಗೂ ಸ್ಯಾಟ್ಲೈಟ್ ಬಸ್ ನಿಲ್ದಾಣ ವ್ಯಾಪ್ತಿಯಲ್ಲಿ ಹೋಟೆಲ್ಗಳಿಗೆ ದಿನ ಪೂರ್ತಿ ಕಾರ್ಯನಿರ್ವಹಿಸಲು ಸುನೀಲ್ ಕುಮಾರ್ ಅನುಮತಿ ನೀಡಿದ್ದರು.
ಆದರೆ ಇತ್ತೀಚಿಗೆ ಪೊಲೀಸರು, ರಾತ್ರಿ 10 ಗಂಟೆ ಬಳಿಕ ಹೋಟೆಲ್ಗಳನ್ನು ಬಂದ್ ಮಾಡಿಸುತ್ತಿದ್ದರು. ಇದರಿಂದ ಹೋಟೆಲ್ಗಳಿಗೆ ನಷ್ಟ ಉಂಟಾಗಿತ್ತು. ಇನ್ನು ಕರೊನಾ ಸೋಂಕು ಬಳಿಕ ಹೋಟೆಲ್ಗಳಿಗೆ ಪೊಲೀಸರು ನಿರ್ಬಂಧ ಹೆಚ್ಚಾಯಿತು. ಪೊಲೀಸರ ಕಿರುಕುಳದಿಂದ ಬೇಸತ್ತ ಹೋಟೆಲ್ ಮಾಲೀಕರ ಸಂಘವು, ಇತ್ತೀಚಿಗೆ ನಗರ ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ ಅವರನ್ನು ಭೇಟಿಯಾಗಿ 2016ರ ಆದೇಶದಂತೆ ರಾತ್ರಿ 1 ಗಂಟೆವರೆಗೆ ವಹಿವಾಟು ನಡೆಸಲು ಅನುಮತಿ ನೀಡುವಂತೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಆಯುಕ್ತರು, ಹೋಟೆಲ್ಗಳನ್ನು ಅವಧಿ ಮುಂಚೆ ಬಂದ್ ಮಾಡದಂತೆ ಪೊಲೀಸರಿಗೆ ಸೂಚನೆ ಕೊಟ್ಟಿದ್ದಾರೆ.