ನಕ್ಸಲರೊಂದಿಗೆ ನಂಟು: ಮಾಜಿ ಪ್ರಾಧ್ಯಾಪಕ ಸಾಯಿಬಾಬಾ ಬಿಡುಗಡೆಗೆ 'ಸುಪ್ರೀಂ' ತಡೆ

DU Prof Saibaba
Published on

ನವದೆಹಲಿ: ನಕ್ಸಲರೊಂದಿಗೆ ನಂಟು ಹೊಂದಿರುವ ಪ್ರಕರಣದಲ್ಲಿ ಜೈಲು ಸೇರಿದ್ದ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಜಿ.ಎನ್​.​ ಸಾಯಿಬಾಬಾರನ್ನು ಖುಲಾಸೆಗೊಳಿಸಿ ತಕ್ಷಣವೇ ಜೈಲಿನಿಂದ ಬಿಡುಗಡೆ ಮಾಡುವಂತೆ ಬಾಂಬೆ ಹೈಕೋರ್ಟ್​ನ ನಾಗ್ಪುರ ಪೀಠ ನಿನ್ನೆ(ಶುಕ್ರವಾರ) ಹೊರಡಿಸಿದ್ದ ಆದೇಶಕ್ಕೆ ಇಂದು(ಶನಿವಾರ) ಸುಪ್ರೀಂ ಕೋರ್ಟ್​ ತಡೆ ನೀಡಿದ್ದು, ಸದ್ಯಕ್ಕೆ ಸಾಯಿಬಾಬಾಗೆ ಬಿಡುಗಡೆ ಭಾಗ್ಯವಿಲ್ಲ.

ಮಾವೋವಾದಿ ಜತೆ ಸಂಪರ್ಕ, ರಾಷ್ಟ್ರದ್ರೋಹದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಪ್ರಕರಣದಲ್ಲಿ ಪ್ರೊಫೆಸರ್​ ಸಾಯಿಬಾಬಾ ಮತ್ತು ಪತ್ರಕರ್ತ, ಜವಾಹರಲಾಲ್​ ನೆಹರು ವಿಶ್ವವಿದ್ಯಾನಿಲಯದ (ಜೆಎನ್​ಯು) ವಿದ್ಯಾರ್ಥಿ ಸೇರಿದಂತೆ ಇತರ ಕೆಲವರನ್ನು 8 ವರ್ಷಗಳ ಹಿಂದೆ ಅಂದರೆ 2014ರ ಮೇ ತಿಂಗಳಲ್ಲಿ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದರು. 2017ರ ಮಾರ್ಚ್​ನಲ್ಲಿ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಸೆಷನ್ಸ್​ ನ್ಯಾಯಾಲಯವು ಭಾರತೀಯ ದಂಡ ಸಂಹಿತೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿಯಲ್ಲಿ ಸಾಯಿಬಾಬಾ ಮತ್ತು ಇತರರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಜೈಲಿಗೆ ಕಳುಹಿಸಿತ್ತು. ದೈಹಿಕ ನ್ಯೂನತೆಯಿಂದಾಗಿ ಸಾಯಿಬಾಬಾ ಗಾಲಿಕುರ್ಚಿ ಬಳಸುತ್ತಿದ್ದು, ಸದ್ಯ ನಾಗ್ಪುರ ಕೇಂದ್ರ ಕಾರಾಗೃಹದಲ್ಲಿದ್ದಾರೆ.

2017ರ ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಸಾಯಿಬಾಬಾ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್​ನ ನ್ಯಾಯಮೂರ್ತಿಗಳಾದ ರೋಹಿತ್​ ದೇವ್​ ಮತ್ತು ಅನಿಲ್​ ಪನ್ಸಾರೆ ವಿಭಾಗೀಯ ಪೀಠವು, ಸಾಯಿಬಾಬಾ ಸೇರಿ ಇತರೆ ಅರೋಪಿಗಳು ಬೇರೆ ಯಾವುದೇ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರದಿದ್ದರೆ ತಕ್ಷಣವೇ ಬಿಡುಗಡೆ ಮಾಡಬಹುದು ಎಂದು ಹೇಳಿತ್ತು. ಈ ತೀರ್ಪನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್​ ಮೆಟ್ಟಿಲೇರಿತ್ತು. ಸರ್ಕಾರದ ಅರ್ಜಿಯನ್ನು ಶನಿವಾರ ತುರ್ತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​, ಬಾಂಬೆ ಹೈಕೋರ್ಟ್​ ಆದೇಶಕ್ಕೆ ತಡೆ ನೀಡಿದೆ.(ಏಜೆನ್ಸಿಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net