

ಬೆಂಗಳೂರು: 6 ವರ್ಷಗಳ ಹಿಂದೆ ಬೇರ್ಪಟ್ಟಿದ್ದ ತಾಯಿ-ಮಗನನ್ನು ಆಧಾರ್ ಕಾರ್ಡ್ ಡೀಟೇಲ್ಸ್ ಒಂದು ಮಾಡಿದೆ!
2016ರಲ್ಲಿ ಸಂತೆಯಲ್ಲಿ ತರಕಾರಿ ಮಾರಾಟ ಮಾಡುವ ವೇಳೆ ವರ್ಷದ ಹಿಂದೆ ಸಿಂಗನಾಯಕನಹಳ್ಳಿಯ ಪಾರ್ವತಮ್ಮ ಅವರು ಮಗ ಭರತ್ನನ್ನು ಕಳೆದುಕೊಂಡಿದ್ದರು. ಸಂತೆಯಲ್ಲಿ ನಾಪತ್ತೆಯಾದ ಮೂಗ ಮಗನಿಗಾಗಿ ತಾಯಿ ಹುಡುಕಾಟ ನಡೆಸಿದ್ದರು. ಎಷ್ಟೋ ದೇವರಿಗೆ ಹರಕೆ ಹೊತ್ತಿದ್ದರು. ನಿತ್ಯ ಮಗನಿಗಾಗಿ ತಾಯಿ ಕಾಯುತ್ತಲೇ ಇದ್ದರು. ಇದೀಗ ಆಧಾರ್ ಕಾರ್ಡ್ ಮೂಲಕ ತಾಯಿ ಮಡಿಲಿಗೆ ಮಗ ಸೇರಿದ್ದು, ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ.
ಯಲಹಂಕದ ಸಂತೆಯಲ್ಲಿ ತಪ್ಪಿಸಿಕೊಂಡ ಭರತ್, ಮಹಾರಾಷ್ಟ್ರದ ನಾಗ್ಪುರ ರೈಲು ನಿಲ್ದಾಣ ಸೇರಿದ್ದ. ಭರತ್ನನ್ನು ರಕ್ಷಿಸಿ ಪುನರ್ ವಸತಿ ಕೇಂದ್ರಕ್ಕೆ ರೈಲ್ವೆ ಅಧಿಕಾರಿಗಳು ತಲುಪಿಸಿದ್ದರು. ಮಾತು ಬಾರದ ಭರತ್, ಅಲ್ಲೇ ನೆಲೆಸಿದ್ದ. ಈ ಬಗ್ಗೆ ಯಾವ ಮಾಹಿತಿಯೂ ಇಲ್ಲದ ಪಾರ್ವತಮ್ಮ, ಮಗ ಕಾಣೆಯಾಗಿದ್ದಾನೆ ಎಂದು ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ನಾಗ್ಪುರದ ಪುನರ್ ವಸತಿ ಕೇಂದ್ರದಲ್ಲೇ 6 ವರ್ಷಗಳಿಂದ ಆಶ್ರಯ ಪಡೆದಿದ್ದ ಭರತ್ಗೆ 2022ರಲ್ಲಿ ಆಧಾರ್ ಕಾರ್ಡ್ ಮಾಡಿಸಲು ಆಧಾರ್ ಸೇವಾ ಕೇಂದ್ರಕ್ಕೆ ಭರತ್ನನ್ನು ಅಧಿಕಾರಿಗಳು ಕರೆದೊಯ್ದಿದ್ದರು. ಈ ವೇಳೆ ಬೆರಳಚ್ಚು ಪಡೆದಾಗ ಹೊಸ ಆಧಾರ್ ಕಾರ್ಡ್ಗೆ ರಿಜೆಕ್ಟ್ ತೋರಿಸಿತ್ತು. ಭರತ್ ಬೆರಳಚ್ಚಿನಿಂದ ಆಧಾರ್ ಕಾರ್ಡ್ ತೆಗೆದುಕೊಂಡಿದ್ದ ಆಧಿಕಾರಿಗಳಿಗೆ ಈತ ಬೆಂಗಳೂರು ಮೂಲದವ ಎಂದು ಗೊತ್ತಾಗಿದೆ. ಈ ಬಗ್ಗೆ ಅಡ್ರೆಸ್ ನೋಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಪುನರ್ ವಸತಿ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದರು. ಅಲ್ಲಿಂದ ಯಲಹಂಕ ಪೊಲೀಸರಿಗೆ ಮಾಹಿತಿ ಬಂದಿತ್ತು. ಕೂಡಲೇ ಭರತ್ನ ತಾಯಿ ಪಾರ್ವತಮ್ಮರನ್ನು ಪತ್ತೆ ಹಚ್ಚಿದ ಯಲಹಂಕ ಪೊಲೀಸರು ನಾಗ್ಪುರಕ್ಕೆ ಕರೆದೊಯ್ದಿದ್ದರು. ಈ ವೇಳೆ ಮಗನನ್ನ ಕಂಡು ಭಾವುಕರಾದ ತಾಯಿ ಭರತ್ನನ್ನು ತಬ್ಬಿ ಮುದ್ದಾಡಿದರು. ಈ ಭಾವುಕ ಕ್ಷಣ ಕಂಡು ಪೊಲೀಸರು ಮತ್ತು ಅಧಿಕಾರಿಗೂ ಭಾವುಕರಾಗಿದ್ದರು.
ತಾಯಿ ಮಡಿಲಿಗೆ ಮಗ ಸೇರುವಂತೆ ಮಾಡಿದ ಆಧಾರ್ ಕಾರ್ಡ್ ಮತ್ತು ಇಂತಹ ಡಿಜಿಟಲ್ ವ್ಯವಸ್ಥೆ ಜಾರಿ ಮಾಡಿದವರಿಗೂ ಪಾರ್ವತಮ್ಮ ಧನ್ಯವಾದ ತಿಳಿಸಿದ್ದಾರೆ.