ಭಾಷೆ ವಿಚಾರಕ್ಕೇ ಚಂದ್ರು ಕೊಲೆ! ಸಿಐಡಿ ಸಲ್ಲಿಸಿದ ಚಾರ್ಜ್​ಶೀಟ್​ನಲ್ಲಿ ರಹಸ್ಯ ಬಹಿರಂಗ

chandru
Published on

ಬೆಂಗಳೂರು: ಜೆಜೆ ನಗರದ ಹಳೆಗುಡ್ಡದ ಪ್ರದೇಶದಲ್ಲಿ ಕಲೆದ ಮಾ.4ರ ರಾತ್ರಿ ಕೊಲೆಯಾದ ಯುವಕ ಚಂದ್ರಶೇಖರ್ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು 179 ಪುಟಗಳ ಚಾರ್ಜ್​ಶೀಟ್‌ ಸಲ್ಲಿಸಿದ್ದು, ಕೊಲೆಗೆ ಕಾರಣ ಏನೆಂಬುದು ಬಯಲಾಗಿದೆ. ಭಾಷೆ ವಿಚಾರಕ್ಕೇ ಚಂದ್ರು ಕೊಲೆ ನಡೆದಿದೆ ಎಂಬ ಆಘಾತಕಾರಿ ವಿಷಯ ಇದರಲ್ಲಿದೆ. ಸಾವಿಗೆ ಬೈಕ್​ ಅಪಘಾತ ಕಾರಣವಲ್ಲ, ಉರ್ದು ಭಾಷೆಯಲ್ಲಿ ಮಾತಾಡಲಿಲ್ಲ ಅನ್ನೋದೇ ಚಂದ್ರು ಕೊಲೆಗೆ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಏನಿದು ಪ್ರಕರಣ?: ಕಾಟನ್​ಪೇಟೆಯ ಜೈಮಾರುತಿನಗರ ನಿವಾಸಿ ಚಂದ್ರಶೇಖರ್ (22) ಎಂಬಾತನನ್ನು ಮಾ.4ರ ತಡರಾತ್ರಿ ಕೊಲೆ ಮಾಡಲಾಗಿತ್ತು. ಆರೋಪಿ ಶಾಹಿದ್​ ಸೇರಿ ಹಲವರನ್ನು ಜೆ.ಜೆ. ನಗರ ಪೊಲೀಸರು ವಶಕ್ಕೆ ಬಂಧಿಸಿದ್ದರು. ಗೂಡ್ಸ್​ಶೆಡ್​ ರಸ್ತೆಯಲ್ಲಿರುವ ರೈಲ್ವೆ ವಿಭಾಗೀಯ ಕಚೇರಿಯಲ್ಲಿ ಚಂದ್ರು ಉದ್ಯೋಗ ತರಬೇತಿ ಪಡೆಯುತ್ತಿದ್ದ. ಸ್ನೇಹಿತ ಸೈಮನ್​ ಹುಟ್ಟುಹಬ್ಬ ಆಚರಿಸಲು ಮಾ.4ರ ರಾತ್ರಿ ಆತನ ಮನೆಗೆ ಹೋಗಿದ್ದ. ಆ ವೇಳೆ ಚಿಕನ್​ ರೋಲ್​ ತರಲೆಂದು ಸೈಮನ್ ಮತ್ತು ಚಂದ್ರು ಇಬ್ಬರೂ ತಡರಾತ್ರಿ ಬೈಕ್​ನಲ್ಲಿ ಜೆ.ಜೆ. ನಗರಕ್ಕೆ ಹೋಗಿದ್ದರು. ಹಳೇಗುಡ್ಡದಹಳ್ಳಿಯ ಕಾವೇರಿ ಆಶ್ರಮ ಶಾಲೆ ಸಮೀಪ ನಿಯಂತ್ರಣ ತಪ್ಪಿದ ಚಂದ್ರುವಿನ ಬೈಕ್​ ಮುಂದಿನಿಂದ ಬರುತ್ತಿದ್ದ ಶಾಹಿದ್​ ಬೈಕ್​ಗೆ ಡಿಕ್ಕಿ ಹೊಡೆದಿತ್ತು. ಯಾರಿಗೂ ಗಾಯಗಳಾಗಿರಲಿಲ್ಲ.

ಈ ವೇಳೆ ಸರಿಯಾಗಿ ಬೈಕ್​ ಚಲಾಯಿಸುವಂತೆ ಶಾಹಿದ್​ಗೆ ಚಂದ್ರು ಬೆದರಿಸಿದ್ದ. ಇದರಿಂದ ಕೆರಳಿದ ಶಾಹಿದ್​, ತನ್ನ ಸ್ನೇಹಿತರನ್ನು ಸ್ಥಳಕ್ಕೆ ಕರೆಸಿ ಚಂದ್ರು ಹಾಗೂ ಸೈಮನ್​ ಜತೆ ಜಗಳ ಮಾಡಿದ್ದ. ಜಗಳ ವಿಕೋಪಕ್ಕೆ ತಿರುಗಿ ಶಾಹಿದ್​ ತನ್ನ ಬಳಿಯಿದ್ದ ಚೂರಿಯಿಂದ ಚಂದ್ರು ತೊಡೆಗೆ ಇರಿದು ಪರಾರಿಯಾಗಿದ್ದ. ಭೀರವಾಗಿ ಗಾಯಗೊಂಡಿದ್ದ ಚಂದ್ರುವನ್ನು ಗೆಳೆಯ ಸೈಮನ್​ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದನಾದರೂ ಬದುಕಲಿಲ್ಲ.

ಬೈಕ್​ ಡಿಕ್ಕಿಯಾಗಿದ್ದ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ಹೇಳಿದ್ದರು. ಆದರೆ, ಗಲಾಟೆ ವೇಳೆ ಉರ್ದು ಭಾಷೆಯಲ್ಲಿ ಮಾತಾಡುವಂತೆ ಶಾಹಿದ್​ ತಂಡ ಹೇಳಿದೆ. ಈ ವೇಳೆ ಉರ್ದು ಬರಲ್ಲ ಎಂದು ಕನ್ನಡದಲ್ಲೇ ಮಾತನಾಡಿದ ಚಂದ್ರುವನ್ನ ಚುಚ್ಚಿ ಕೊಲ್ಲಲಾಗಿದೆ ಎಂದು ಹೋಂ ಮಿನಿಸ್ಟರ್​ ಮತ್ತು ಸಿ.ಟಿ.ರವಿ ಹೇಳಿದ್ದರು. ಈ ಪ್ರಕರಣ ವಿವಾದದ ಸ್ವರೂಪ ಪಡೆದಿತ್ತು. ಇದರ ಬೆನ್ನಲ್ಲೇ ತಮ್ಮ ಹೇಳಿಕೆಯನ್ನು ಹೋಂ ಮಿನಿಸ್ಟರ್​ ಹಿಂಪಡೆದಿದ್ದರು. ಪ್ರಕರಣದ ತನಿಖೆಯನ್ನ ಸಿಐಡಿಗೆ ವಹಿಸಲಾಗಿತ್ತು.

ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು, ನ್ಯಾಯಾಲಯಕ್ಕೆ ಇದೀಗ ಚಾರ್ಜ್​ಶೀಟ್​ ಸಲ್ಲಿಸಿದ್ದು, ಚಂದ್ರು ಸಾವಿಗೆ ಕಾರಣ ಏನೆಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net