

ಬೆಂಗಳೂರು: ವಿದ್ಯಾರ್ಥಿಗಳು ಶಿಸ್ತು, ಸಮರ್ಪಣೆ ಮನೋಭಾವ ಮತ್ತು ನಿರ್ಣಯ ತೆಗೆದುಕೊಳ್ಳುವ ಶಕ್ತಿ ರೂಢಿಸಿಕೊಂಡಲ್ಲಿ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಉಪ ರಾಷ್ಟಪತಿ ವೆಂಕಯ್ಯನಾಯ್ಡು ತಿಳಿಸಿದರು.
ಬನಶಂಕರಿ 3ನೇ ಹಂತದಲ್ಲಿರುವ ಪಿಇಎಸ್ ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿ ಮಾತನಾಡಿದರು. ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡ ಕನಸುಗಳನ್ನು ಇಟ್ಟುಕೊಳ್ಳಬೇಕು. ಅದನ್ನು ಸಾಧಿಸಲು ಕಠಿಣ ಪರಿಶ್ರಮ ಹಾಕಬೇಕು. ಯಶಸ್ಸಿಗೆ ಯಾವುದೇ ಶಾರ್ಟ್ ಕಟ್ ಇಲ್ಲ. ಕಠಿಣ ಪರಿಶ್ರಮದಿಂದಲೇ ಮುಂದೆ ಬರಬೇಕು. ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಮಾಜದಲ್ಲಿ ಎದುರಾಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವತ್ತ ಮುಂದಾಗಬೇಕು. ಇಂದು ನಮ್ಮ ದೇಶದಲ್ಲಿ ವಾತಾವರಣ ಬದಲಾವಣೆಯಾಗುತ್ತಿದೆ. ಜನಸಂಖ್ಯೆ ಹೆಚ್ಚಳವಾಗುತ್ತಿದೆ. ಇವು ಮುಂದೆ ಸಮಸ್ಯೆಯಾಗಿ ಪರಿವರ್ತನೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಈ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಬೇಕು ಎಂದರು.
ಪಿಐಎಸ್ ವಿವಿಯು ಉಪಗ್ರಹ ರೂಪಿಸಿ ಉಡಾವಣೆ ಮಾಡಿರುವುದು ಮತ್ತು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಮಾಡಿರುವ ಕಾರ್ಯವನ್ನು ಉಪ ರಾಷ್ಟಪತಿ ವೆಂಕಯ್ಯನಾಯ್ಡು ಪ್ರಶಂಸೆ ವ್ಯಕ್ತಪಡಿಸಿದರು. ಈ ಸಮಾರಂಭದಲ್ಲಿ 2400 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು. ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್, ಪಿಇಎಸ್ ಕುಲಾಧಿಪತಿ ಎಂ.ಆರ್. ದೊರೆಸ್ವಾಮಿ ಇತರರು ಇದ್ದರು.