ಕೃಷಿಯಲ್ಲಿ ಸಾಧನೆ ಮಾಡಲು ಬಯಸಿದ್ದೀರಾ? ಇಲ್ಲಿದೆ ಸುವರ್ಣಾವಕಾಶ, ಈ 4 ದಿನದಲ್ಲಿ ಒಮ್ಮೆಯಾದ್ರೂ ಬನ್ನಿ

krushi mela
Published on

ಬೆಂಗಳೂರು: ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ನಿಮ್ಮ ಮನಸು ಹವಣಿಸುತ್ತಿದೆಯೇ? ಹೌದು, ನಾನೂ ಕೃಷಿ ಮಾಡಬೇಕು, ಲಾಭ ಗಳಿಸಬೇಕು, ಅದರಲ್ಲೇ ಬದುಕು ರೂಪಿಸಿಕೊಳ್ಳಬೇಕು, ಹತ್ತಾರು ಜನರಿಗೆ ಉದ್ಯೋಗ ಕೊಟ್ಟು ಮಾದರಿ ರೈತ ಎನ್ನಿಸಿಕೊಳ್ಳಬೇಕು... ಆದರೆ ನಾನು ಏನನ್ನು? ಹೇಗೆ? ಎಲ್ಲಿ? ಎಷ್ಟು ಬೆಳೆಯಬೇಕು? ಮಾರುಕಟ್ಟೆ ಹೇಗೆ ಎಂಬಿತ್ಯಾದಿ ಮಾಹಿತಿಯೇ ಇಲ್ಲ ಎಂದು ಯೋಚಿಸುತ್ತಿದ್ದೀರಾ? ಚಿಂತೆ ಬೇಡ. ನಿಮಗೊಂದು ಸುವರ್ಣಾವಕಾಶ ಇಲ್ಲಿದೆ. ಇದರ ಸದ್ಬಳಕೆಗೆ ನೀವು ಮನಸ್ಸು ಮಾಡಬೇಕು ಅಷ್ಟೆ.

ನ.11ರಿಂದ 14ರವರೆಗೆ ಬೆಂಗಳೂರಿನ ಜಿಕೆವಿಕೆ(ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ) 'ಕೃಷಿಮೇಳ-2021' ನಡೆಯುತ್ತಿದ್ದು, ರೈತರ ಆದಾಯ ದ್ವಿಗುಣಗೊಳಿಸುವ ಕೃಷಿ ತಂತ್ರಜ್ಞಾನ, ಸುಧಾರಿತ ಬೇಸಾಯ, ಮಾರುಕಟ್ಟೆ, ಮೌಲ್ಯವರ್ಧನೆ ಬಗ್ಗೆ ಜನರಿಗೆ ಮಾಹಿತಿ ನೀಡಲಾಗುತ್ತದೆ. ವಸ್ತು ಪ್ರದರ್ಶನದಲ್ಲಿ 250 ಮಳಿಗೆಗಳು ಇರಲಿದ್ದು, ಮಹತ್ವದ ಮಾಹಿತಿ ಪಡೆಯಲು ಪ್ರತಿಯೊಬ್ಬರಿಗೂ ಅವಕಾಶವಿದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆಯೋಜಿಸಿರುವ ಈ ಮೇಳದಲ್ಲಿ ರೈತರ ಚರ್ಚಾಗೋಷ್ಠಿ, ನೂತನ ತಳಿಗಳ ಪ್ರಾತ್ಯಕ್ಷಿಕೆ, ಸಾವಯವ ಕೃಷಿ ಪದ್ಧತಿ, ರೈತರ ಸಮಸ್ಯೆಗಳಿಗೆ ತಜ್ಞರಿಂದ ಸಲಹೆ, ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ, ಕೊಯ್ಲಿನೋತ್ತರ ತಾಂತ್ರಿಕತೆ, ಹೈನುಗಾರಿಕೆ, ಕುರಿ, ಕೋಳಿ ಮತ್ತು ಮೀನು ಸಾಕಾಣಿಕೆ, ಸಮಗ್ರ ಬೇಸಾಯ ಪದ್ಧತಿ, ತೋಟಗಾರಿಕೆ ಬೆಳೆಗಳ ಪ್ರಾತ್ಯಕ್ಷಿಕೆ ಸೇರಿ ಹಲವು ಮಾಹಿತಿಗಳನ್ನು ಪಡೆಯಲು ಕೃಷಿಮೇಳ ಸೂಕ್ತ ವೇದಿಕೆಯಾಗಿದೆ. ಬೀಜ ಮತ್ತು ಕೃಷಿ ಯಂತ್ರೋಪಕರಣಗಳನ್ನು ಸಬ್ಸಿಡಿ ಆಧಾರದಲ್ಲಿ ಖರೀದಿಸಬಹುದು.

ಆನ್​ಲೈನ್​ನಲ್ಲೇ ವೀಕ್ಷಿಸಬಹುದು: ಜಿಕೆವಿಕೆ ಮುಖ್ಯದ್ವಾರದಿಂದ ಕೃಷಿ ಮೇಳದ ಸಭಾಂಗಣದವರಿಗೆ ಉಚಿತ ವಾಹನ ವ್ಯವಸ್ಥೆ ಇರುತ್ತದೆ. ಅಂಗೈಯಲ್ಲಿ ಕೃಷಿಮೇಳ ವೀಕ್ಷಣೆಗೆ ಅನುಕೂಲವಾಗುವಂತೆ ವೆಬ್​ಪೇಜ್​, ವೆಬ್​ಸೈಟ್​, ಯುಟ್ಯೂಬ್​, ಫೇಸ್​ಬುಕ್​ ಮತ್ತು ಜೂಮ್​ ಸಭೆಯಲ್ಲಿ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ನೇರಪ್ರಸಾರ ವೀಕ್ಷಿಸಬಹುದು.

ಸಾಮಾಜಿಕ ಜಾಲತಾಣದ ಲಿಂಕ್​ಗಳು

ವೆಬ್​ಸೈಟ್​- https://www.uasbangalore.edu.in

ಫೇಸ್​ಬುಕ್- https://www.facebook.com/sis.uasb/

ಟ್ವಿಟರ್​- https://twitter.com/BangaloreUas

ಇನ್​ಸ್ಟಾಗ್ರಾಮ್- https://www.instagram.com/uasbangalore1964/?hl=en

ಜೂಮ್​ ಸಭೆ- https://bit.ly/3CNVMCR ID: 3765459767 Passcode: 22121

ಪ್ರಶಸ್ತಿಯೂ ಕೊಡ್ತಾರೆ

ಕೃಷಿ ಕ್ಷೇತ್ರದಲ್ಲಿನ ಗಣನೀಯ ಸಾಧನೆ ಮಾಡಿದವರಿಗೆ ಪ್ರತಿವರ್ಷ ಕೃಷಿ ಮೇಳದಲ್ಲಿ ಪ್ರಶಸ್ತಿ ನೀಡಲಾಗುತ್ತೆ. ಈ ಬಾರಿ 7 ರಾಜ್ಯಮಟ್ಟದ ಪ್ರಶಸ್ತಿ, 10 ಜಿಲ್ಲಾ ಮಟ್ಟದ ಪ್ರಗತಿಪರ ರೈತ ಪ್ರಶಸ್ತಿ ಮತ್ತು ರೈತ ಮಹಿಳಾ ಪ್ರಶಸ್ತಿ ಹಾಗೂ 61 ತಾಲೂಕು ಮಟ್ಟದ ಪ್ರಶಸ್ತಿಗಳನ್ನು ಕೃಷಿ ಮೇಳದಲ್ಲಿ ನೀಡಲಾಗುವುದು.

ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರು

ಎಚ್​.ಡಿ. ದೇವೇಗೌಡ ಅತ್ಯುತ್ತಮ ರೈತ: ಎಂ.ಸಿ.ರಂಗಸ್ವಾಮಿ, ಹಾಸನ

ಡಾ.ಎಂ.ಎಚ್​. ಮರೀಗೌಡ ಅತ್ಯುತ್ತಮ ತೋಟಗಾರಿಕಾ ರೈತ: ಟಿ.ಎಂ. ಅರವಿಂದ, ಬೆಂ.ಗ್ರಾ.

ಕೆನರಾ ಬ್ಯಾಂಕ್​ ಅತ್ಯುತ್ತಮ ರೈತ ಮಹಿಳೆ: ವೈ.ಜಿ. ಮಂಜುಳಾ, ಹಾಸನ

ಕೆನರಾ ಬ್ಯಾಂಕ್​ ಅತ್ಯುತ್ತಮ ರೈತ: ಸಿ. ನವಿಕ್ರಮ್​, ಬೆಂ.ಗ್ರಾ.

ಡಾ.ಆರ್​. ದ್ವಾರಕೀನಾಥ್​ ಅತ್ಯುತ್ತಮ ರೈತ: ಮುನಿರೆಡ್ಡಿ, ಕೋಲಾರ

ಡಾ.ಆರ್​. ದ್ವಾರಕೀನಾಥ್​ ವಿಸ್ತರಣಾ ಕಾರ್ಯಕರ್ತ: ಡಾ.ಎ.ಪಿ. ಮಲ್ಲಿಕಾರ್ಜುನಗೌಡ

ಡಾ.ಎಂ.ಎಚ್​. ಮರೀಗೌಡ ತೋಟಗಾರಿಕಾ ಸಂಶೋಧನಾ ಪ್ರಶಸ್ತಿ: ಡಾ.ಎಚ್​.ಪಿ. ಮಹೇಶ್ವರಪ್ಪ

10 ಹೊಸ ತಳಿಗಳ ಅಭಿವೃದ್ಧಿ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ 10 ಹೊಸ ತಳಿಗಳ ಪ್ರಾತ್ಯಕ್ಷಿಕೆಯನ್ನು ರೈತರು ಕೃಷಿ ಮೇಳದಲ್ಲಿ ವೀಕ್ಷಿಸಬಹುದು. ಭತ್ತ (ಕೆಎಂಪಿ-220 ಮತ್ತು ಎಂಎಸ್​ಎನ್​-99), ರಾಗಿ (ಕೆಎಂಆರ್​-316), ನವಣೆ (ಜಿಪಿಯುಎಫ್​-3), ಸಾಮೆ (ಜಿಪಿಯುಎಲ್​-6), ಬರಗು (ಜಿಪಿಯುಪಿ-28), ಬೀಜದ ದಂಟು (ಕೆಬಿಜಿಎ-15), ಕಬ್ಬು (ಸಿಒವಿಸಿ-18061) ಹಲಸು (ಬೈರಚಂದ್ರ), ಮೇವಿನ ತೋಕೆ ಗೋಧಿ (ಆರ್​ಒ-11-1) ನೂತನ ತಳಿಗಳಾಗಿವೆ. ಜತೆಗೆ 28 ಕೃಷಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದೆ. ಈ ಎಲ್ಲ ತಳಿಗಳು ಹಿಂದಿನ ತಳಿಗಳಿಗಿಂತ ಶೇ.10 ಹೆಚ್ಚು ಇಳುವರಿ ಸಾಮರ್ಥ್ಯ ಹೊಂದಿದ್ದು, ಬೇಗನೆ ರೋಗಕ್ಕೆ ತುತ್ತಾಗುವುದಿಲ್ಲ.

ಬೆಂಕಿರೋಗ ನಿರೋಧಕ ಕೆಂಪಕ್ಕಿ ಭತ್ತ

ಕೆಎಂಪಿ-220 ಭತ್ತವು ಹೊಸ ತಳಿಯಾಗಿದ್ದು, 125ರಿಂದ 130 ದಿನಗಳಲ್ಲಿ ಕೊಯ್ಲು ಮಾಡಬಹುದು. ಎಕರೆಗೆ 26 ಕ್ವಿಂಟಾಲ್​ ಧಾನ್ಯ ಹಾಗೂ 32 ಕ್ವಿಂಟಾಲ್​ ಮೇವು ಬರಲಿದೆ. ಆಗಸ್ಟ್​ ಮೊದಲ ವಾರದೊಳಗೆ ನಾಟಿ ಮಾಡಲು ಸೂಕ್ತವಾಗಿದೆ. ಅಕ್ಕಿ ಕೆಂಪಾಗಿರಲಿದ್ದು ಉದ್ದ ಮತ್ತು ದಪ್ಪವಾಗಿರುತ್ತದೆ. ಈ ತಳಿಯು ಬೆಂಕಿರೋಗ ನಿರೋಧಕ ಶಕ್ತಿಯನ್ನೂ ಹೊಂದಿದೆ. ಇನ್ನೊಂದು ಹೊಸ ತಳಿ ಎಂಎಸ್​ಎನ್​99 ಭತ್ತದ ಅಕ್ಕಿಯು ಮಧ್ಯಮ ಸಣ್ಣದಾಗಿದ್ದು, ಊಟಕ್ಕೆ ರುಚಿಕರವಾಗಿದೆ. 3 ತಿಂಗಳಲ್ಲಿ ಕೊಯ್ಲಿಗೆ ಬರಲಿದ್ದು, ಪ್ರತಿ ಎಕರೆಗೆ 27 ಕ್ವಿಂಟಾಲ್​ ಭತ್ತದ ಧಾನ್ಯ ಹಾಗೂ 30 ಕ್ವಿಂಟಾಲ್​ ಮೇವು ಬರಲಿದೆ. ಮುಂಗಾರು, ತಡವಾದ ಮುಂಗಾರು ಮತ್ತು ಬೇಸಿಗೆ ಹಂಗಾಮಿಗೆ ಸೂಕ್ತವಾಗಿದ್ದು, ಗಟ್ಟಿ ಕಾಂಡ ಮತ್ತು ನೇರವಾಗಿ ಬೆಳೆಯುವ ಗುಣ ಹೊಂದಿದೆ. ಬೆಳೆಯ ಎತ್ತರ 110 ಸೆಂ.ಮೀ. ಉದ್ದವಿರುತ್ತದೆ ಎಂದು ಕೃಷಿ ವಿವಿ ಕುಲಪತಿ ಮಾಹಿತಿ ನೀಡಿದ್ದಾರೆ.

ಪ್ರತಿ ಎಕರೆಗೆ 70 ಟನ್​ ಕಬ್ಬು ಇಳಿವರಿ

ಕೃಷಿ ವಿವಿ ಅಭಿವೃದ್ಧಿಪಡಿಸಿದ ಸಿಓವಿಸಿ 18061 ಕಬ್ಬಿನ ತಳಿ ಪ್ರಸ್ತುತ ಬೆಳೆಯುತ್ತಿರುವ ಕಬ್ಬುಗಳಿಗಿಂತ ಉತ್ತಮ ಇಳುವರಿಯನ್ನು ಕೊಡುತ್ತದೆ. ಒಂದು ವರ್ಷಕ್ಕೆ ಕಟಾವಿಗೆ ಬರಲಿದ್ದು, ಪ್ರತಿ ಎಕರೆಗೆ 60ರಿಂದ 70 ಟನ್​ ಇಳುವರಿ ಬರಲಿದೆ. ಕೂಳೆ ಬೆಳೆಯಲ್ಲಿ ಪ್ರತಿ ಎಕರೆಗೆ 60 ಟನ್​ ಇಳುವರಿ ಬರುತ್ತದೆ. ಈ ಕಬ್ಬು ಜನವರಿ& ಫೆಬ್ರವರಿ ತಿಂಗಳಲ್ಲಿ ನಾಟಿಗೆ ಯೋಗ್ಯವಾಗಿದೆ ಎಂದು ರಾಜೇಂದ್ರ ಪ್ರಸಾದ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net