ಕೆಆರ್​ಎಸ್​ಗೆ ಬಾಗಿನ ಅರ್ಪಿಸಿ ಕನ್ನಂಬಾಡಿ ನಿರ್ಮಾತೃಗಳನ್ನ ಸ್ಮರಿಸಿದ ಸಿಎಂ ಬೊಮ್ಮಾಯಿ

krs dam
Published on

ಮಂಡ್ಯ: ಕೆಆರ್​ಎಸ್​ ಡ್ಯಾಂ ಭರ್ತಿಯಾದ ಹಿನ್ನೆಲೆ ಬುಧವಾರ ಕಾವೇರಿ ಮಾತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಗಿನ ಅರ್ಪಿಸಿದರು. ಬಳಿಕ ಕಾವೇರಿ ಮಾತೆ ಪ್ರತಿಮೆಗೆ ಪೂಜೆ ಸಲ್ಲಿಸಿದರು.

ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್​ ಡ್ಯಾಂನ ಕಾವೇರಿ ಪ್ರತಿಮೆ ಮುಂಭಾಗ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ನಾಡಿನ ಜೀವನದಿ ಕಾವೇರಿ. ಈ ಭಾಗದ ಭಾಗ್ಯದ ಬಾಗಿಲು ತೆಗೆದ ತಾಯಿ. ಮೈಸೂರಿನ ಮಹಾರಾಜರು ಈ ಕನ್ನಂಬಾಡಿ ಕಟ್ಟಿದ್ದಾರೆ. ಅವರ ಶ್ರಮ, ತ್ಯಾಗ ಮರೆಯಲು ಅಸಾಧ್ಯ. ಬೃಹತ್ ನೀರಾವರಿ ಯೋಜನೆ ತಂದಿದ್ದಾರೆ. ವಿಶ್ವೇಶ್ವರಯ್ಯ ಅವರನ್ನ ನಾವು ನೆನೆಯಬೇಕು. ಈ ಡ್ಯಾಂ ನಮ್ಮ ಪವರ್ ಗ್ರಿಡ್. ಇದನ್ನು ಉಳಿಸಿಕೊಳ್ಳಬೇಕಾದ್ದು ನಮ್ಮೆಲ್ಲರ ಜವಾಬ್ದಾರಿ ಎಂದರು.

ನೀರಾವರಿ ಸಚಿವನಾಗಿದ್ದಾಗ ಇಲ್ಲಿಗೆ ಬಂದಿದ್ದೆ. ಹಳೇ ಗೇಟ್​ಗಳು ಸಂಪೂರ್ಣ ಹಾಳಾಗಿದ್ದವು. ಅದರಿಂದ ಸಾಕಷ್ಟು ನೀರು ಪೋಲಾಗಿತ್ತು. ಅದನ್ನ ನೋಡಿ ನನಗೆ ನಿದ್ದೆಯೇ ಬರಲಿಲ್ಲ. ತಕ್ಷಣ ಆ ಗೇಟ್​ಗಳ ಬದಲಾವಣೆ ಮಾಡಲು ನಿರ್ಧಾರ ಮಾಡಿದೆ. ಮೊದಲು 16 ಗೇಟ್ ರಿಪೇರಿ ಮಾಡಿಸಿದೆ. ಇನ್ನೂ 61 ಗೇಟ್ ಬದಲಾವಣೆ ಮಾಡಬೇಕಿದೆ. ಇನ್ನು ಒಂದೂವರೆ ವರ್ಷದಲ್ಲಿ ಕಾರ್ಯ ಮುಗಿಯಬೇಕು. ಗೇಟ್​ಗಳ ಬದಲಾವಣೆಗೆ 150 ಕೋಟಿ ರೂ. ವೆಚ್ಚವಾಗಿದೆ. ಈ ಕಾಮಗಾರಿ ಮುಗಿಸಿ ಕೆಆರ್​ಎಸ್​ನ 75ನೇ ವರ್ಷ ಆಚರಣೆ ಮಾಡ್ತೀವಿ ಎಂದು ಸಿಎಂ ಹೇಳಿದರು.

ಮುಂದಿನ ವಾರ ಮೇಕೆದಾಟು ಯೋಜನೆ ಅಂತಿಮ ಆದೇಶ ಬರುವ ಸಾಧ್ಯತೆ ಇದೆ. ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ನಮ್ಮ ವಕೀಲರು ಸಮರ್ಥವಾಗಿ ವಾದ ಮಾಡುತ್ತಿದ್ದಾರೆ, ಮುಂದಿನ ವಾರ ಮತ್ತೊಂದು ವಿಚಾರಣೆ ಇದೆ. ಅಂದು ಅಂತಿಮ ಆದೇಶ ಹೊರಬೀಳುವ ಸಾಧ್ಯತೆ ಇದೆ, ನಂತರ ಡಿಪಿಆರ್ ಅನುಮೋದನೆ ಪಡೆದು ಕೆಲಸ ಪ್ರಾರಂಭಿಸುತ್ತೇವೆ. ರಾಜಕೀಯ ಕಾರಣಕ್ಕೆ ತಮಿಳುನಾಡು ಯೋಜನೆಯನ್ನು ವಿರೋಧಿಸುತ್ತಿದೆ‌. ಆದರೂ ನಾವು ಫೈಟ್ ಮಾಡುತ್ತೇವೆ. ಮೇಕೆದಾಟು ಯೋಜನೆ ಅನುಷ್ಠಾನವಾಗಿ ನೀರು ಸಂಗ್ರಹವಾದರೆ, ನೀರಿನ ಅಭಾವ ಎದುರಾದಾಗ ಎರಡೂ ರಾಜ್ಯದವರು ಬಳಕೆ ಮಾಡಿಕೊಳ್ಳಬಹುದು ಎಂದರು.

ಸಚಿವರಾದ ಗೋವಿಂದ ಕಾರಜೋಳ, ಎಸ್.ಟಿ.ಸೋಮಶೇಖರ್, ಗೋಪಾಲಯ್ಯ, ಕೆ.ಸಿ.ನಾರಾಯಣಗೌಡ, ಶಾಸಕ ರವೀಂದ್ರ ಶ್ರೀಕಂಠಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net