

ಸೋಮವಾರಪೇಟೆ: ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಹೆರಿಗೆಗಾಗಿ ಕರೆದೊಯ್ಯುವ ಸಂದರ್ಭ ಮಾರ್ಗ ಮಧ್ಯೆ 108 ಅಂಬುಲೆನ್ಸ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಪ್ರಕರಣ ಮಂಗಳವಾರ ಬೆಳಿಗ್ಗೆ ನಡೆದಿದೆ.
ಬಳಗುಂದ ಗ್ರಾಮದ ಕಾಫಿ ತೋಟದ ಲೈನ್‌ನಲ್ಲಿ ವಾಸವಾಗಿರುವ ಅಸ್ಸಾಂ ಮೂಲದ ಕಾರ್ಮಿಕ ಶಹಜಾನ್ ಅವರ ಪತ್ನಿ ಹಿರಾದನ್(37) ಮಗುವಿಗೆ ಜನ್ಮ ನೀಡಿದ್ದಾರೆ.
ರಕ್ತದೊತ್ತಡ ಹೆಚ್ಚಾಗಿದ್ದ ಕಾರಣ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ಸಂದರ್ಭ, ಹೊಸತೋಟದ ಬಳಿಯಲ್ಲಿ ಹೆರಿಗೆ ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಪುರುಷ ಸ್ಟಾಫ್‌ನರ್ಸ್ ಹೇಮಂತ್‌ಕುಮಾರ್ ಮತ್ತು ಚಾಲಕ ಪ್ರಸನ್ನ ಸೇರಿ ಹೆರಿಗೆ ಮಾಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ತಾಯಿ, ಮಗು ಆರೋಗ್ಯವಾಗಿದ್ದಾರೆ.