

ಗೌರಿಬಿದನೂರು: ಹಲವು ವರ್ಷಗಳಿಂದ ಸಮಸ್ಯೆ ಎದುರಿಸುತ್ತಿರುವ ನಗರಸಭೆ ವ್ಯಾಪ್ತಿಯ ಕಟ್ಟಡಗಳಿಗೆ ಬಿ-ಖಾತಾ ನೀಡಲು ಅಭಿಯಾನ ನಡೆಸಲಾಗುತ್ತಿದೆ ಎಂದು ಪೌರಾಯುಕ್ತೆ ಡಿ.ಎಂ.ಗೀತಾ ಹೇಳಿದರು.
ನಗರಸಭೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಇ-ಖಾತೆ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಈ ಹಿಂದೆ ನಗರಸಭೆ ಮೇಲ್ದರ್ಜೆಗೇರಿದ ಬಳಿಕ ನಗರಸಭೆ ವ್ಯಾಪ್ತಿಗೆ ಸೇರಿದ ಗ್ರಾಮ ಪಂಚಾಯಿತಿಗಳ ಹಳ್ಳಿಗಳಲ್ಲಿನ ಖಾತೆ ಸಮಸ್ಯೆ ಜಟಿಲವಾಗಿತ್ತು. ಯಾವುದೇ ದಾಖಲೆಯಿಲ್ಲದೆ ಖಾತೆ ಪಡೆಯಲು ಜನರಿಗೆ ತೊಂದರೆಯಾಗುತ್ತಿತ್ತು. ಜನರ ಕಷ್ಟವನ್ನು ಅರಿತು ಸರ್ಕಾರ ಒಮ್ಮೆ ಅವಕಾಶ ಕಲ್ಪಿಸಿದೆ.
ಕರ್ನಾಟಕ ಪೌರಸಭೆಗಳ ತೆರಿಗೆ ನಿಯಮ 2025 ಮತ್ತು ಮಹಾನಗರ ಪಾಲಿಕೆಗಳ ತೆರಿಗೆ ನಿಯಮ 2025ರಂತೆ ಎ ಮತ್ತು ಬಿ ಖಾತೆ ಹಂಚಿಕೆ ಮಾಡಲಾಗುತ್ತಿದೆ. ದಾಖಲೆಗಳಿರುವ ಕಟ್ಟಡ ಮಾಲೀಕರು ಎ ಖಾತೆ ಪಡೆದುಕೊಳ್ಳಬಹುದು. ಉಳಿದವರು ಈ ಹಿಂದೆ ಗ್ರಾಪಂ ಕಟ್ಟಡ ಮತ್ತು ನಿವೇಶನಗಳಿಗೆ ಸಂಬಂಧಪಟ್ಟಂತೆ ನೀಡಿರುವ ದಾಖಲೆಗಳನ್ನು ಸಲ್ಲಿಸಿ ಬಿ ಖಾತೆ ಪಡೆದುಕೊಳ್ಳಲು ಅವಕಾಶ ಒದಗಿಸಲಾಗಿದೆ. ನೇರವಾಗಿ ಬಂದು ದಾಖಲೆಗಳನ್ನು ಸಲ್ಲಿಸಿ ಖಾತೆಗಳನ್ನು ಪಡೆಯಬಹುದು. ಈ ಕುರಿತು ಈಗಾಗಲೇ ವಾರ್ಡ್‌ವಾರು ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಎಲ್ಲ ವಾರ್ಡ್‌ಗಳ ಸದಸ್ಯರು ತಮ್ಮ ವಾರ್ಡ್ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಬಗ್ಗೆ ಅರಿವು ಮೂಡಿಸಬೇಕು. ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ನಗರಸಭೆ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ ಮಾತನಾಡಿ, ನಗರಸಭೆಯಲ್ಲಿ ಸೇವಾ ಕೇಂದ್ರ ತೆರೆಯಲಾಗಿದೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ನಗರಸಭೆ ಕಚೇರಿಯಲ್ಲಿ ಸಲ್ಲಿಕೆಯಾದ ಅರ್ಜಿಗಳ ಬಗ್ಗೆ ಮುಂದಿನ ಪ್ರಕ್ರಿಯೆ ನಡೆಸಲು ತಾತ್ಕಾಲಿಕವಾಗಿ ನುರಿತ ಕಂಪ್ಯೂಟರ್ ಸಿಬ್ಬಂದಿ ನೇಮಿಸಿಕೊಳ್ಳಲಾಗುವುದು ಎಂದು ಉಪಾಧ್ಯಕ್ಷ ಫರೀದ್ ಹೇಳಿದರು.
ಸದಸ್ಯರಾದ ಪದ್ಮಾವತಮ್ಮ, ಜಯರಾಂ, ಡಿ.ಎ.ಮಂಜುಳಾ, ವಿನಾಯಕನಗರ ಮಂಜುಳಾ, ಅಮರ್, ಕಲ್ಲೂಡಿ ಗೋಪಾಲ್, ಸುಬ್ಬರಾಜು ಮತ್ತಿತರರು ಹಾಜರಿದ್ದರು.
ನಾಮನಿರ್ದೇಶಿತ ನೂತನ ಸದಸ್ಯ ಡಿ.ಜೆ.ಚಂದ್ರಮೋಹನ್ ಅವರನ್ನು ಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ದಂಧೆಗೆ ಅವಕಾಶ ಬೇಡ
ಇ-ಖಾತೆ ಅಭಿಯಾನದಲ್ಲಿ ದಲ್ಲಾಳಿಗಳ ಮೂಲಕ ದಂಧೆಗೆ ಅವಕಾಶ ನೀಡಬಾರದು ಎಂದು ಸದಸ್ಯರಾದ ಖಲೀಂ, ಡಿ.ಜೆ. ಚಂದ್ರಮೋಹನ್, ವಿ.ರಮೇಶ್, ಆರ್.ಪಿ. ಗೋಪಿನಾಥ್ ಸೇರಿ ಹಲವರು ಪಕ್ಷಾತೀತವಾಗಿ ಒಕ್ಕೊರಲಿನಿಂದ ಆಗ್ರಹಿಸಿದರು. ಜನಜಾಗೃತಿ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕು. ಮೂರು ತಿಂಗಳ ಕಾಲಾವಧಿಯ ಖಾತಾ ಅಭಿಯಾನದ ಬಗ್ಗೆ ಕಚೇರಿ ಸಿಬ್ಬಂದಿ ಮನೆ ಮನೆಗೂ ಹೋಗಿ ಕರಪತ್ರ ನೀಡಿ ಮಾಹಿತಿ ನೀಡಬೇಕು. ಆ ಮೂಲಕ ಪಾರದರ್ಶಕತೆಗೆ ಒತ್ತು ನೀಡಬೇಕು ಎಂದು ಒತ್ತಾಯಿಸಿದ ಚಂದ್ರಮೋಹನ್, ಭ್ರಷ್ಟಾಚಾರದ ಬಗ್ಗೆ ನಿರ್ದಿಷ್ಟವಾಗಿ ದೂರುಗಳು ಕೇಳಿಬಂದಲ್ಲಿ ಲೋಕಾಯುಕ್ತರಿಗೆ ದೂರು ಸಲ್ಲಿಸಿ ಎಫ್‌ಐಆರ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.