

ಬೆಂಗಳೂರು: ಆಟೋ ಓಡಿಸುವ ಶೋಕಿ ಬೆಳೆಸಿಕೊಂಡ ಬಾಲಕನೊಬ್ಬ, ಸಂಜೆ ವೇಳೆ ನಗರದ ವಿವಿಧೆಡೆ ಸುತ್ತಾಡಿ ಆಟೋಗಳ ಮೇಲೆ ಕಣ್ಣಿಡುತ್ತಿದ್ದ. ತಡರಾತ್ರಿ ಆ ಆಟೋಗಳನ್ನು ಕದ್ದು ಸಮಾಧಾನ ಆಗುವವರೆಗೂ ಸುತ್ತಾಡುತ್ತಿದ್ದ. ಬಳಿಕ ರಸ್ತೆಬದಿ ನಿಲ್ಲಿಸಿ ಪರಾರಿಯಾಗುತ್ತಿದ್ದ. ಮತ್ತೆ ಬೇರೆ ಆಟೋ ಕದ್ದು ಅದೇ ರೀತಿ ಸುತ್ತಾಡಿ ರಸ್ತೆಬದಿ ನಿಲ್ಲಿಸುತ್ತಿದ್ದ...
ಇಂತಹ ವಿಚಿತ್ರ ಕಳ್ಳನನ್ನು ವಶಕ್ಕೆ ಪಡೆದ ಕೆಂಗೇರಿ ಠಾಣೆ ಪೊಲೀಸರು, 6 ಆಟೋಗಳನ್ನು ಜಪ್ತಿ ಮಾಡಿದ್ದಾರೆ. ಮಾ.11ರ ರಾತ್ರಿ ಕೆಂಗೇರಿಯ ಮನೆಯ ಎದುರು ನಿಲ್ಲಿಸಿದ್ದ ಆಟೋ ಕಳುವಾಗಿತ್ತು. ಈ ಸಂಬಂಧ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಂಡ ಪೊಲೀಸರು, ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಈತ ನೀಡಿದ ಮಾಹಿತಿ ಮೇರೆಗೆ ವಿವಿಧೆಡೆ ಕಳವು ಮಾಡಿದ್ದ 15 ಲಕ್ಷ ರೂ. ಮೌಲ್ಯದ 6 ಆಟೋಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.