ಕಾಲುವೆಗೆ ಆಟೋ ಪಲ್ಟಿ: ಮೂವರು ಮಹಿಳೆಯರ ಸಾವು, ಇನ್ನೂ ಮೂವರು ನಾಪತ್ತೆ

New Project(41)
Published on

ಬಳ್ಳಾರಿ: ಕೊಳಗಲ್ ಗ್ರಾಮದ ಬಳಿ ಎಚ್‌ಎಲ್‌ಸಿ ಕಾಲುವೆಗೆ ಆಟೋ ಪಲ್ಟಿಯಾಗಿದ್ದು, ಮೂವರು ಮಹಿಳೆಯರು ಮೃತಪಟ್ಟಿದ್ದಾರೆ. ನೀರಿನಲ್ಲಿ ಕೊಚ್ಚಿ ಹೋಗಿರುವ ಇನ್ನೂ ಮೂವರಿಗಾಗಿ ಹುಡುಕಾಟ ನಡೆಯುತ್ತಿದೆ.

ನಿಂಗಮ್ಮ, ದುರ್ಗಮ್ಮ, ಪುಷ್ಪಾವತಿ ಮೃತ ದುರ್ದೈವಿಗಳು. ಲಕ್ಷ್ಮೀ, ನಾಗರತ್ನ, ಹುಲಿಗೆಮ್ಮ ಎಂಬುವವರು ನೀರಿನಲ್ಲಿ ಕೊಚ್ಚಿಹೋಗಿದ್ದು, ಗ್ರಾಮಾಂತರ ಠಾಣೆ ಪೋಲಿಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಹಗ್ಗದಿಂದ ಆಟೋ ಎಳೆಯಲು ಪ್ರಯತ್ನಿಸಿದರೂ ಹಗ್ಗ ತುಂಡಾದ ಪರಿಣಾಮ ಆಟೋ ಕೊಚ್ಚಿಕೊಂಡು ಹೋಗಿದೆ.

ಒಟ್ಟು ಡ್ರೈವರ್​ ಸೇರಿ 11 ಮಂದಿ ಕೊಳಗಲ್ ಗ್ರಾಮದಿಂದ ಜಮೀನಿನ ಕೆಲಸಕ್ಕೆಂದು ಆಟೋದಲ್ಲಿ ಪ್ರಯಾಣಿಸುತ್ತಿದ್ದರು. ಆಟೋ ಎಚ್ಎಲ್​ಸಿ ಕಾಲುವೆ ಪಕ್ಕದಲ್ಲೇ ಹೋಗುತ್ತಿದ್ದ ಆಟೋಗೆ ಮಾರ್ಗಮಧ್ಯೆ ರಸ್ತೆಯಲ್ಲಿ ಕಲ್ಲು ತಾಗಿ ಆಟೋ ಸ್ಕಿಡ್ ಆಗಿ ಪಕ್ಕದ ನಾಲೆಗೆ ಬಿದ್ದಿದೆ. ಪ್ರಯಾಣಿಕರ ಚೀರಾಟ ಕೇಳಿ ನಾಲೆ ಬಳಿಗೆ ಬಂದ ಸ್ಥಳೀಯರು ಮೂವರು ಮಹಿಳೆಯರು ಸೇರಿ ಐವರನ್ನು ರಕ್ಷಿಸಿದ್ದಾರೆ. ಉಳಿದವರ ಪೈಕಿ ಮೂವರು ಮೃತಪಟ್ಟಿದ್ದು ಶವಗಳನ್ನು ಹೊರ ತೆಗೆಯಲಾಗಿದೆ. ಇನ್ನೂ ಮೂವರು ಮಹಿಳೆಯರು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಅವರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಬಳ್ಳಾರಿ ಎಸ್ಪಿ ಸೈದುಲ್ ಅದಾವತ್ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net