

ಬಾಗಲಕೋಟೆ: ಬೂಟ್ ಪಾಲೀಶ್ ಚಳವಳಿಗೆ ಕನ್ನಡ ಕಿರುತೆರೆ ನಟಿ, ಕರವೇ ರಾಜ್ಯ ಮಹಿಳಾ ಉಪಾಧ್ಯಕ್ಷೆ ಅಶ್ವಿನಿ ಗೌಡ ಸಾಥ್ ಕೊಟ್ಟಿದ್ದು, ಹೋರಾಟಕ್ಕೆ ಮತ್ತಷ್ಟು ಬಲ ಸಿಕ್ಕಿದೆ.
ಬಾಗಲಕೋಟೆಯಲಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಆಗ್ರಹಿಸಿ ಒಂದು ತಿಂಗಳಿಂದ ಬೂಟ್ ಪಾಲೀಶ್ ಚಳವಳಿ ನಡೆಯುತ್ತಿದೆ. 2014ರ ಬಜೆಟ್ನಲ್ಲಿ ಬಾಗಲಕೋಟೆಗೆ ಮೆಡಿಕಲ್ ಕಾಲೇಜು ಘೋಷಣೆ ಆಗಿತ್ತು. ಆದರೆ ಈವರೆಗೂ ಅನುದಾನ ಸಿಗದೆ ಮೆಡಿಕಲ್ ಕಾಲೇಜು ಆರಂಭವಾಗಿಲ್ಲ. ಹಾಗಾಗಿ ಸರ್ಕಾರದ ಗಮನ ಸೆಳೆಯಲು ಕಳೆದ ತಿಂಗಳು ಬೂಟ್ ಪಾಲೀಶ್ ಚಳವಳಿ ಆರಂಭವಾಗಿದೆ. ಮೊದಲ ದಿನ ಕರವೇ ಜಿಲ್ಲಾಧ್ಯಕ್ಷ ರಮೇಶ್ ಬದ್ನೂರು ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಾಂಕೇತಿಕವಾಗಿ ಚಾಲನೆ ಸಿಕ್ಕಿತ್ತು.
ಕರವೇ ಕಾರ್ಯಕರ್ತರು ಬಾಗಲಕೋಟೆಯಲ್ಲಿ ತಿಂಗಳಿಂದ ಬೂಟ್ ಪಾಲೀಶ್ ಚಳವಳಿ ನಡೆಸುತ್ತಿದ್ದು, ಇಂದು(ಡಿ.11) ಅಶ್ವಿನಿ ಗೌಡ ಅವರು ಈ ಚಳವಳಿಗೆ ಧುಮುಕಿದ್ದಾರೆ. ಜಿಲ್ಲಾಧ್ಯಕ್ಷ ರಮೇಶ್ ಬದ್ನೂರು ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದಾರೆ. ಬಾಗಲಕೋಟೆಯ ರೈಲ್ವೆ ನಿಲ್ದಾಣದಿಂದ ಬಸವೇಶ್ವರ ಸರ್ಕಲ್ವರೆಗೂ ನಡೆದ ಚಳವಳಿಯಲ್ಲಿ ದಾರಿಯುದ್ದಕ್ಕೂ ಸಿಗುವ ಅಂಗಡಿ ಮಾಲೀಕರ, ಪಾದಚಾರಿಗಳ ಬೂಟ್ ಪಾಲೀಶ್ ಅಶ್ವಿನಿ ಗೌಡ ಮತ್ತು ನೂರಾರು ಮಹಿಳಾ ಕಾರ್ಯಕರ್ತೆಯರು ಹಣ ಸಂಗ್ರಹಿಸಿದರು.