

ಧಾರವಾಡ: ಇವರೆಲ್ಲ ಮುಂಬೈ ನಿವಾಸಿಗಳು ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾರೆ. ಸಾಲ ಪಡೆದ ಗ್ರಾಹಕರ ಫೋಟೊಗಳನ್ನು ಎಡಿಟ್ ಮಾಡಿ ಅಶ್ಲೀಲ ಚಿತ್ರಗಳಿಗೆ ಜೋಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವ ಬೆದರಿಕೆಯೊಡ್ಡುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರೆಲ್ಲರೂ ಲೋನ್ ಆ್ಯಪ್ ಏಜೆಂಟರ್ಗಳು. ಧಾರವಾಡದಲ್ಲಿ ಮಹಾರಾಷ್ಟ್ರದ ಸೈಬರ್ ಕ್ರೈಂ ಪೊಲೀಸರು ಇವರನ್ನು ಬಂಧಿಸಿದ್ದಾರೆ.
ಸೊಹೈಲ್ ನಸೀರುದ್ದೀನ್ ಸಯ್ಯದ್(24), ಅಹ್ಮದ್ ರರ ಜಾಹಿದ್ ಹುಸೇನ್(26), ಸಯ್ಯದ್ ಅಖ್ತರ್ (24), ಕೈಫ್ ಕಾದರಿ (22), ಮುಫ್ತಿಯಾಜ್ ಬಾಷಾ ಪೀರಜಾದೆ(21) ಬಂಧಿತ ಆರೋಪಿಗಳು. ಈ ಪೈಕಿ ಓರ್ವ ಎಂಬಿಎ ಪದವೀಧರ, ಉಳಿದವರು ಸಹ ಸುಶಿಕ್ಷಿತರೇ ಆಗಿದ್ದಾರೆ ಎನ್ನಲಾಗಿದೆ. ಇವರೆಲ್ಲ ಮುಂಬೈ ನಿವಾಸಿಗಳು.
ಮುಂಬೈನ ಭಾಂಡುಪ್ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯ ವ್ಯಕ್ತಿಯೊಬ್ಬ ಲೋನ್ ಆ್ಯಪ್ ಮೂಲಕ 11,000 ರೂ. ಸಾಲ ಪಡೆದಿದ್ದ. ಈತನ ಫೋಟೋ ಎಡಿಟ್ ಮಾಡಿ ಕಿರುಕುಳ ಕೊಡುತ್ತಿದ್ದ ತಂಡ, 96,000 ರೂ. ವಸೂಲಿ ಮಾಡಿತ್ತು. ಮತ್ತೆ ಹಣಕ್ಕಾಗಿ ಬ್ಯ್ಲಾಕ್ ಮೇಲ್ ಮಾಡುತ್ತಿದ್ದರು. ನೊಂದ ವ್ಯಕ್ತಿ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದ.
ಮುಂಬೈ ಪೊಲೀಸರು ಬಂಧಿಸಿರುವ ಐವರ ಪೈಕಿ ಓರ್ವನು ರಾಜ್ಯದ ಮೊಬೈಲ್ ಸಂಖ್ಯೆ ಬಳಸಿ ಲೋನ್ ಪಡೆದ ಗ್ರಾಹಕನಿಗೆ ವಾಟ್ಸ್ಆ್ಯಪ್ ಮೂಲಕ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳನ್ನು 5 ದಿನ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಮಹಾರಾಷ್ಟ್ರದ ಸೈಬರ್ ಕ್ರೈಂ ಪೊಲೀಸ್ ಠಾಣೆಗಳಲ್ಲಿ ಕಳೆದ 2 ವರ್ಷಗಳಲ್ಲಿ ಇಂಥ 2,084 ಪ್ರಕರಣಗಳು ದಾಖಲಾಗಿವೆ.