

ಭೋಪಾಲ್: ಕುಡಿಯುವ ನೀರಿನ ಬಾಟಲಿ ಖರೀದಿಸಲು ಪತಿಯೊಂದಿಗೆ ಹೋಟೆಲ್ಗೆ ಹೋದ ಮಹಿಳೆಗೆ ದುಷ್ಕರ್ಮಿಗಳು ಅಶ್ಲೀಲವಾಗಿ ಕಮೆಂಟ್ ಮಾಡಿ ಶಿಳ್ಳೆ ಹೊಡೆದಿದ್ದರು. ಇದನ್ನು ವಿರೋಧಿಸಿದ ಮಹಿಳೆ ದುಷ್ಕರ್ಮಿಗಳ ಪೈಕಿ ಓರ್ವನ ಕಪಾಳಕ್ಕೆ ಮೂರ್ನಾಲ್ಕು ಏಟು ಕೊಟ್ಟಿದ್ದಳು... ಇಷ್ಟಾದರೂ ಸುಮ್ಮನಾಗದ ಕಾಮುಕರು, ಆಕೆಯ ಮುಖಕ್ಕೆ ಬ್ಲೇಡ್ನಿಂದ ಮನಸೋಇಚ್ಛೆ ಹಲ್ಲೆ ಮಾಡಿ ವಿಕೃತಿ ಮೆರೆದಿದ್ದಾರೆ.
ಇಂತಹ ಅಮಾನುಷ ಕೃತ್ಯ ಮಧ್ಯಪ್ರದೇಶದ ಭೋಪಾಲ್ನ ಟಿಟಿ ನಗರ ಪ್ರದೇಶದಲ್ಲಿ ಸಂಭವಿಸಿದೆ. ಅಂದು ನೀರಿನ ಬಾಟಲಿ ಖರೀದಿಸಲು ಪತಿಯೊಂದಿಗೆ ಹೋಟೆಲ್ಗೆ ಮಹಿಳೆ ತೆರಳಿದ್ದರು. ಆಕೆಯ ಪತಿ ಹೋಟೆಲ್ನಲ್ಲಿದ್ದಾಗ ಆರೋಪಿಗಳು ಅಶ್ಲೀಲವಾಗಿ ಕಾಮೆಂಟ್ ಮಾಡಿ ಶಿಳ್ಳೆ ಹೊಡೆದಿದ್ದರು. ಇದನ್ನು ವಿರೋಧಿಸಿದ ಮಹಿಳೆ ಒಬ್ಬನಿಗೆ ಕಪಾಳ ಮೋಕ್ಷ ಮಾಡಿದ್ದರು. ಘಟನೆ ವಿಕೋಪಕ್ಕೆ ಹೋಗುತ್ತಿದ್ದಂತೆ ಸ್ಥಳೀಯರು ಮಧ್ಯಪ್ರವೇಶಿಸಿ ಎರಡೂ ಕಡೆ ಸಮಾಧಾನ ಮಾಡಿ ಕಳುಹಿಸಿದ್ದರು.
ನಂತರ ಮಹಿಳೆ ಹೋಟೆಲ್ ಒಳಗೆ ಹೋಗಿ ಪತಿಯೊಂದಿಗೆ ಹೊರಬಂದಾಗ ಆರೋಪಿಗಳು ಬ್ಲೇಡ್ನಿಂದ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮುಖಕ್ಕೆ 118 ಹೊಲಿಗೆಗಳನ್ನು ಹಾಕಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಹೋಟೆಲ್ನ ಸಿಸಿ ಕ್ಯಾಮರಾದ ದೃಶ್ಯಾವಳಿ ಪರಿಶೀಲಿಸಿ ಇಬ್ಬರನ್ನು ಬಂಧಿಸಿದ್ದಾರೆ. ಉಳಿದವರ ಪತ್ತೆಗೆ ಬಲೆ ಬೀಸಿದ್ದಾರೆ.