

ತುಮಕೂರು: ಹುಚ್ಚು ಹಿಡಿದಿರೋರು ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಹೋಗಬೇಕು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಟೀಕಿಸಿದರು.
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ, ಜಗತ್ತಿನ ಶ್ರೇಷ್ಠ ನಾಯಕ ಪ್ರಧಾನಿ ಮೋದಿ ಅವರನ್ನು ಹೊಂದಿರುವ ಪಕ್ಷ ಬಿಜೆಪಿ. ಆ ಪಕ್ಷವನ್ನು ತೊರೆದು ಕಾಂಗ್ರೆಸ್ಗೆ ಹೋಗುವರಿಗೆ ಹುಚ್ಚು ಹಿಡಿದಿರಬೇಕಷ್ಟೇ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಪಕ್ಷವು ಒಂದು ಪಾಲಿಸಿ ತೆಗೆದುಕೊಂಡಿದೆ. ಹಾಗಾಗಿ, ಜಿಲ್ಲೆಯನ್ನು ಹೊರತುಪಡಿಸಿ ಬೇರೆ ಬೇರೆಯವರ ಜಿಲ್ಲೆಯವರಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಮೊದಲ ಭೇಟಿ ವೇಳೆ ಜ್ಞಾನೇಂದ್ರ ಸ್ಪಷ್ಟಪಡಿಸಿದರು.
ಜೆ.ಸಿ.ಮಾಧುಸ್ವಾಮಿ ಅವರನ್ನು ಬೇರೆ ರೀತಿಯಲ್ಲಿ ಸರ್ಕಾರದಲ್ಲಿ ಬಳಸಿಕೊಳ್ಳಲಾಗುವುದು. ಮಾಧುಸ್ವಾಮಿ ಮತ್ತು ಅಶೋಕ್ ಬುದ್ಧಿವಂತರು. ಅವರನ್ನು ಸಿಎಂ ಬೊಮ್ಮಾಯಿ ಅವರು ಸಮರ್ಥವಾಗಿ ಬಳಸಿಕೊಳ್ಳುವರು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.