

ಚಿಕ್ಕಬಳ್ಳಾಪುರ(ಗುಡಿಬಂಡೆ): ವಿಶಿಷ್ಟ ಹಾಗೂ ವಿಭಿನ್ನವಾದ ವೈಮಾನಿಕ ಪ್ರಾಜೆಕ್ಟ್ ಕಾರ್ಯಗತ ಮಾಡಿ ರಾಷ್ಟ್ರಮಟ್ಟದ ವಿನ್ಯಾಸ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆಯುವ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಜಿ.ಎನ್.ಕೀರ್ತಿ ಗಡಿ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾಳೆ.
ಏರೋಸ್ಪೇಸ್ ಪರಿಕಲ್ಪನಾ ವಿನ್ಯಾಸದಲ್ಲಿ ಮೊದಲ ಸ್ಥಾನ ಪಡೆದ ಕೀರ್ತಿ ಗುಡಿಬಂಡೆ ಪಟ್ಟಣದ 2ನೇ ವಾರ್ಡ್ನ ಶಿಕ್ಷಕ ನಾಗರಾಜ್ ಮತ್ತು ಪಟ್ಟಣ ಪಂಚಾಯಿತಿ ಮಾಜಿ ಸದಸ್ಯೆ ಲಕ್ಷ್ಮೀಕಾಂತಮ್ಮ ದಂಪತಿ ಪುತ್ರಿ. ಬೆಂಗಳೂರಿನ ಎಂವಿಜೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ಏರೋನಾಟಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾಳೆ.
ಮುಂಬೈನ ದಿ ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ ಸಂಸ್ಥೆ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರೀಯ ಏರೋಸ್ಪೇಸ್ ಪರಿಕಲ್ಪನಾ ವಿನ್ಯಾಸ ಸ್ಪರ್ಧೆಯಲ್ಲಿ ಸಹಪಾಠಿಗಳಾದ ಕೆ.ಪಿ.ಅಮೃತಾಂಶು, ಕೌಶಿಕ್, ಉದಯಚಂದ್ರನ್, ಮಿಥುನ್ ಫ್ರಾನ್ಸಿಸ್, ಅತ್ಯಬ್ ಹಕೀಮ್ ಜತೆ ಸಿದ್ಧಪಡಿಸಿದ ‘ಅಭಿಮನ್ಯು 4.0 ಏರ್ ಟ್ಯಾಕ್ಸಿ’ ಪ್ರಥಮ ಬಹುಮಾನ ಪಡೆದಿದೆ.
ವಾಹನ ದಟ್ಟಣೆ ಹಾಗೂ ವಾಯುಮಾಲಿನ್ಯ ನಿಯಂತ್ರಣದ ನಿಟ್ಟಿನಲ್ಲಿ ಬೆಂಗಳೂರಿನ ಎಂವಿಜೆ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ತಂಡ ‘ಏರ್ಟ್ಯಾಕ್ಸಿ ಐಸ್ ವೀ ಟೋಲಾ (ಇಂಟರ್ಸಿಟಿ ಎಲೆಕ್ಟ್ರಿಕ್ ವರ್ಟಿಕಲ್ ಟೇಕ್ ಆಫ್ ಆ್ಯಂಡ್ ಲ್ಯಾಂಡಿಂಗ್ - ICeVTOLA) ಪ್ರಾಜೆಕ್ಟ್ ಮಾಡಿ ಯಶಸ್ವಿಯಾಗಿ ಹಾರಾಟ ನಡೆಸಿದೆ. ಅತಿ ಕಿರಿದಾದ ಲಘು ವಿಮಾನದಲ್ಲಿ ನಾಲ್ವರು ಪ್ರಯಾಣಿಕರು ಹಾಗೂ ಒಬ್ಬ ಪೈಲಟ್ ಹಾರಾಟ ನಡೆಸಬಹುದಾಗಿದ್ದು 10,000 ಅಡಿ ಎತ್ತರದಲ್ಲಿ 500 ಕಿ.ಮೀ. ದೂರ ಕ್ರಮಿಸಬಹುದಾಗಿದೆ. ಇದು ಸಂಪೂರ್ಣ ವಿದ್ಯುತ್ ಚಾಲಿತವಾಗಿರಲಿದೆ.
26 ತಂಡಗಳು ಭಾಗಿ: ವಿನ್ಯಾಸ ಸ್ಪರ್ಧೆಯಲ್ಲಿ ಬೆಂಗಳೂರಿನ ಎಂವಿಜೆ ಕಾಲೇಜಿನ ವಿದ್ಯಾರ್ಥಿಗಳ ತಂಡ ಸೇರಿ ರಾಜ್ಯದ 3 ಕಾಲೇಜುಗಳು ಹಾಗೂ ದೇಶದ 26 ತಂಡಗಳು ಭಾಗವಹಿಸಿದ್ದವು. ಅದರಲ್ಲಿ ಎಂವಿಜೆ ಕಾಲೇಜಿನ ಅಭಿಮನ್ಯು 4.0 ತಂಡ ಪ್ರಥಮ ಸ್ಥಾನ ಪಡೆದಿದೆ. ಏರ್ಟ್ಯಾಕ್ಸಿ ಲಘು ವಿಮಾನವನ್ನು 2030ರ ವೇಳೆಗೆ ಮಾರುಕಟ್ಟೆಗೆ ಪ್ರಾಯೋಗಿಕವಾಗಿ ತರಲು ತಂಡ ಪ್ರಯತ್ನ ಮಾಡುತ್ತಿದೆ.