ಪ್ರೇಯಸಿಯ ಕೊಂದು ಪ್ರಾಣಬಿಟ್ಟ ಪ್ರಿಯಕರ! ಸಾವಿಗೂ ಮುನ್ನ ಡೆತ್​ನೋಟ್​ನಲ್ಲಿ ಮನದ ನೋವು ಬಿಚ್ಚಿಟ್ಟ ಯುವಕ

love case failur
Published on

ಶಿವಮೊಗ್ಗ: 'ಎಂದಿಗೂ ಪ್ರೀತಿಯನ್ನು ನಂಬಬೇಡಿ ಸ್ನೇಹಿತರೇ' ಎಂದು ಡೆತ್​ನೋಟ್​ ಬರೆದಿಟ್ಟ ಯುವಕನೊಬ್ಬ ಕಾಡಿನಲ್ಲಿ ಪ್ರೇಯಸಿಯನ್ನು ಕೊಂದು ಬಳಿಕ ತಾನೂ ವಿಷ ಕುಡಿದು ದುರಂತ ಅಂತ್ಯ ಕಂಡಿದ್ದಾನೆ.

ಇಂತಹ ಘಟನೆ ಹೊಸನಗರ ತಾಲೂಕು ರಿಪ್ಪನ್ ಪೇಟೆ ಠಾಣೆ ವ್ಯಾಪ್ತಿಯ ಬೆಳ್ಳೂರು ಸಮೀಪದ ನೇರಲಗಿ ಕಾಡಿನಲ್ಲಿ ಸಂಭವಿಸಿದೆ. ಬೆಳ್ಳೂರು ಸಮೀಪದ ಕಗ್ಗಲಿಜಡ್ಡು ಗ್ರಾಮದ ಶಿವಮೂರ್ತಿ ಆತ್ಮಹತ್ಯೆ ಮಾಡಿಕೊಂಡವ. ಸಾಗರ ತಾಲೂಕು ಕಾನೂರು ಗ್ರಾಮದ ಕವಿತಾ ಕೊಲೆಯಾದ ದುರ್ದೈವಿ. ಇವರಿಬ್ಬರ ನಡುವೆ ಹೈಸ್ಕೂಲ್​ನಲ್ಲಿಯೇ ಪ್ರೇಮಾಂಕುರ ಆಗಿತ್ತು. 7 ವರ್ಷಗಳ ಪ್ರೀತಿ ಮೊನ್ನೆ ಕಾಡಿನಲ್ಲಿ ದುರಂತ ಕಂಡಿದ್ದು, ಸಾವಿಗೂ ಮುನ್ನ ಬರೆದಿಟ್ಟ ಡೆತ್​ನೋಟ್​ನಲ್ಲಿ ಪ್ರಿಯಕರ ತನ್ನ ಮನದ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ.

ಶಿವಮೂರ್ತಿ ಹಾಗೂ ಕವಿತಾ ಹೈಸ್ಕೂಲ್​ನಿಂದಲೇ ಪರಸ್ಪರ ಪ್ರೀತಿಸಲಾರಂಭಿಸಿದ್ದರು. ಬಳಿಕ ರಿಪ್ಪನ್ ಪೇಟೆಯ ಕಾಲೇಜಿನಲ್ಲಿ ಪದವಿ ವ್ಯಾಸಂಗಕ್ಕೆ‌ ಶಿವಮೂರ್ತಿ ಸೇರಿದ್ದ. ಕವಿತಾ ಶಿವಮೊಗ್ಗದಲ್ಲಿ‌ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಳು. ಈ ವೇಳೆ‌ ಆಂಬುಲೆನ್ಸ್ ಡ್ರೈವರ್ ಒಬ್ಬನನ್ನು ಕವಿತಾ ಪ್ರೀತಿಸಲಾರಂಭಿಸಿದ್ದಳು ಎನ್ನಲಾಗಿದೆ. ಈ ವಿಚಾರ ತಿಳಿದು ರೊಚ್ಚಿಗೆದ್ದ ಶಿವಮೂರ್ತಿ, ಕವಿತಾಳನ್ನು ತನ್ನೂರಿಗೆ ಕರೆದುಕೊಂಡು ಬಂದಿದ್ದ. ಮಾತನಾಡಬೇಕು ಎಂದೇಳಿ‌ ಕವಿತಾಳನ್ನು ನೇರಲಿಗೆ ಕಾಡಿಗೆ ಬೈಕ್​ನಲ್ಲಿ ಕರೆದೊಯ್ದಿದ್ದ. ಅಂದು ಕೆಲಕಾಲ ಮಾತುಕತೆ ನಡೆದಿದ್ದು, ಇಬ್ಬರೂ ಸೇರಿ ಡೆತ್​ನೋಟ್​ ಬರೆದಿದ್ದಾರೆ. ಬಳಿಕ ಕಾಡಿನ ಹೊಸಕೆರೆ ಬಳಿ ಪ್ರೇಯಸಿಯ ವೇಲ್​ನಿಂದಲೇ ಆಕೆಯ ಕುತ್ತಿಗೆ ಬಿಗಿದು ಕೊಂಡ ಪ್ರಿಯಕರ, ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ‌. ಸಾವು-ಬದುಕಿನ ನಡುವೆ ಒದ್ದಾಡುತ್ತಿದ್ದ ಶಿವಮೂರ್ತಿಯನ್ನು ಸ್ಥಳೀಯರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಗುರುವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾನೆ.

ನೇರಲಗಿ‌ ಕಾಡಿನಲ್ಲಿ ಇಬ್ಬರೂ ಸೇರಿ ಬರೆದಿಟ್ಟಿದ್ದ ಡೆತ್ ನೋಟ್ ಪ್ರೇಯಸಿಯ ಶವದ ಬಳಿ ಪತ್ತೆಯಾಗಿದೆ. ಮೊದಲ ಪುಟದಲ್ಲಿ 'ನನ್ನ ತಂದೆ-ತಾಯಿ ಮತ್ತು ಸ್ನೇಹಿತರಿಗೆ' ಬರೆದ ಪತ್ರ ಎಂದು ನಮೂದಿಸಿರುವ ಶಿವಮೂರ್ತಿ, ಭಟ್ಕಳದ ಹುಡುಗಿಯನ್ನು 7 ವರ್ಷದಿಂದ ಪ್ರೀತಿಸುತ್ತಿದ್ದೆ. ಅವಳೂ ನನ್ನನ್ನು ಪ್ರೀತಿಸಿದ್ದಳು. ಈಗ ಆಂಬುಲೆನ್ಸ್​ ಚಾಲಕನನ್ನು ಇಷ್ಟಪಡುತ್ತಿದ್ದಾಳೆ. ನನಗೆ ಮೋಸ ಮಾಡಿದ್ದಾಳೆ. ಈ ಬಗ್ಗೆ ಅವಳೊಂದಿಗೆ ಮಾತುಕತೆ ನಡೆಸಿ ಅವಳ ನಿರ್ಧಾರದಂತೆ ಮುಂದೆಲ್ಲವೂ ಆಗುತ್ತೆ. ಎಂದಿಗೂ ಪ್ರೀತಿಯನ್ನು ನಂಬಬೇಡಿ ಸ್ನೇಹಿತರೇ... ಎಂದು ಆ.25ರಂದು ಬರೆದಿದ್ದಾನೆ. ಈ ಪತ್ರಕ್ಕೆ ಯುವಕ-ಯುವತಿ ಇಬ್ಬರ ಸಹಿಯೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net