ಹೀಗಿದೆ ಉಪ್ಪಿ ಹೊಸ ಸಿನಿಮಾದ ಫಸ್ಟ್​ ಲುಕ್​... ವಿಭಿನ್ನ ಟೈಟಲ್​ಗೆ ಅಭಿಮಾನಿಗಳು ಫಿದಾ! ಇದರರ್ಥ ಇದೇನಾ?

upendra
Published on

ಬೆಂಗಳೂರು: 'ಓಂ', 'ಶ್'​, 'ಉಪೇಂದ್ರ', 'ಸೂಪರ್'​, 'ಉಪ್ಪಿ-2'... ಹೀಗೆ ಸೂಪರ್​ ಹಿಟ್​ ಚಿತ್ರಗಳನ್ನು ನಿರ್ದೇಶಿಸಿದ್ದ ನಟ ಉಪೇಂದ್ರ ಅವರು ಮತ್ತೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದು, ಬಹುನಿರೀಕ್ಷಿತ ಹೊಸ ಸಿನಿಮಾದ ಪಸ್ಟ್​ ಲುಕ್​ ಇಂದು ಬಿಡುಗಡೆಯಾಗಿದೆ. ತನ್ನ ಸಿನಿಮಾಗಳಿಗೆ ಭಿನ್ನ-ವಿಭಿನ್ನ ಟೈಟಲ್​ ಇಡುವುದರಲ್ಲೂ ಫೇಮಸ್ ಆಗಿರುವ ಉಪೇಂದ್ರ ಅವರು, ಈ ಬಾರಿಯೂ ಅಂಥದ್ದೇ ಒಂದು ಹೊಸ ಟೈಟಲ್​ ಕೊಟ್ಟು ಅಭಿಮಾನಿಗಳ ತಲೆಗೆ ಕೆಲಸ ಹಚ್ಚಿದ್ದಾರೆ.

ಹೊಸ ಸಿನಿಮಾದ ಪೋಸ್ಟರ್​ನಲ್ಲಿ ಕೊಂಬು ಇರುವ ಕುದುರೆ ಮೇಲೆ ಉಪೇಂದ್ರ ಸವಾರಿ ಮಾಡುತ್ತಿದ್ದು, ಅವರ ಲುಕ್​ ಕೂಡ ಗಮನ ಸೆಳೆಯುತ್ತಿದೆ. ಕೆಳಗೆ ಕುದುರೆಯ ಲಾಳಾಕೃತಿಯಲ್ಲಿ ಇಂಗ್ಲಿಷ್​ನ 'U'(ಯು) ಶೀರ್ಷಿಕೆ ಇಟ್ಟು. ಅದರ ಮಧ್ಯೆ ಬೆಂಕಿಯಲ್ಲಿ ಉದ್ದ ನಾಮ ಎಳೆದದಿದ್ದಾರ. ಇದು ಕುದುರೆ ಲಾಳವೋ, ಮೂರು ನಾಮವೋ, ಉಗುರಿನ ಮೇಲೆ ಮತದಾನದ ಇಂಕು ಹಚ್ಚಿದ ಗುರುತೋ... ಎಂದು ಅಭಿಮಾನಿಗಳು ಚರ್ಚಿಸುತ್ತಾ, ಇಂತಹದ್ದೇ ಸಿನಿಮಾಗಾಗಿ ಕಾಯ್ತಿದ್ದೀವಿ ಎಂದು ಖುಷಿಯಾಗಿದ್ದಾರೆ.

ಹೊಸ ಸಿನಿಮಾದ ಫಲ್ಟ್​ ಲುಕ್​ನ ಪೋಸ್ಟರ್​ ಅನ್ನು ಶುಕ್ರವಾರ ಟ್ವಿಟರ್​ನಲ್ಲಿ ಅಪ್​ಲೋಡ್​ ಮಾಡಿರುವ ಉಪೇಂದ್ರ, 'ಚಿತ್ರರಂಗದಲ್ಲಿ ಉಪೇಂದ್ರ ಅನ್ನೊ ಕಥೆ ಮಾಡಿ, 33 ವರ್ಷದ ಚಿತ್ರಕಥೆಯಲ್ಲಿ, ಸಂಭಾಷಣೆ ಹೇಳಿಸಿ, ಶಿಳ್ಳೆ ಚಾಪ್ಪಾಳೆಯಲ್ಲೇ ನಿರ್ದೇಶನ ಮಾಡಿದ ಎಲ್ಲಾ ಅಭಿಮಾನಿ ಪ್ರಜಾ ಪ್ರಭುಗಳಿಗೆ ಈ ಚಿತ್ರ ಅರ್ಪಿಸುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ.

ಚಿತ್ರದ ಅಡಿಬರಹವನ್ನು 7 ಭಾಷೆಯಲ್ಲಿ ಅಂದರೆ, ಒಂದೊಂದು ಪದವನ್ನು ಒಂದೊಂದು ಭಾಷೆಯಲ್ಲಿ ಬರೆಯಲಾಗಿದೆ. ಆರಂಭದಲ್ಲಿ 'ಇವನು' ಎಂಬ ಪದ ಕನ್ನಡದಲ್ಲಿದೆ. 'ಇವನು ಹೇಗೆ ಬರುತ್ತಾನೆ ಎಂದು ತಿಳಿದಿಲ್ಲ. ಆದರೆ, ಖಂಡಿತ ಬರುತ್ತಾನೆ' ಎಂಬ ಅಡಿಬರಹ ಇದೆ. ಈ ಸಿನಿಮಾವನ್ನು ಜಿ.ಮನೋಹರ್​ ಮತ್ತು ಶ್ರೀಕಾಂತ್​ ಕೆ.ಪಿ. ಅವರು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾಗೆ ಉಪೇಂದ್ರ ಅವರೇ ನಿರ್ದೇಶಕ ಹಾಗೂ ನಾಯಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net