

ಬೆಂಗಳೂರು: ಪ್ರಿತಿಸಲು ಒಲ್ಲೆ ಎಂದಾಕೆ ಮೇಲೆ ಏ.28ರಂದು ಹಾಡಹಗಲೇ ಮೇಲೆ ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿದ್ದ ಭಗ್ನಪ್ರೇಮಿ ನಾಗೇಶ್, ಕೃತ್ಯವೆಸಗಿದ ದಿನವೇ ಆತ್ಮಹತ್ಯೆಗೂ ಯತ್ನಿಸಿದ್ದ. ಕೆರೆಗೆ ಹಾರಿ ಪ್ರಾಣ ಬಿಡಲು ಹೋದವ ಮನಸ್ಸು ಬದಲಾಯಿಸಿಕೊಂಡು ಆಶ್ರಮಕ್ಕೆ ಹೋಗಿದ್ದ!
ಈ ಬಗ್ಗೆ ಪೊಲೀಸರ ಬಳಿ ಆರೋಪಿ ನಾಗೇಶನೇ ಬಾಯ್ಬಿಟ್ಟಿದ್ದಾನೆ. ಆ್ಯಸಿಡ್ ಹಾಕಿದ ಕೂಡಲೇ ಆತ್ಮಹತ್ಯೆಗೆ ನಿರ್ಧರಿಸಿದ್ದೆ. ಕೆರೆಗೆ ಹಾರಿ ಪ್ರಾಣ ಬಿಡಲೂ ಹೋಗಿದ್ದೆ. ಅದಕ್ಕಾಗಿ ಮಾರ್ಗದಲ್ಲೇ ಬೈಕ್ ಬಿಟ್ಟು ಆಟೋ ಹತ್ತಿ ಹೋಗಿದ್ದೆ. ಹೊಸಕೋಟೆವರೆಗೂ ಆಟೋದಲ್ಲೇ ತೆರಳಿದ್ದೆ. ಅಲ್ಲಿ ಒಂದು ಕೆರೆ ಕಂಡು ಆತ್ಮಹತ್ಯೆ ಮಾಡಿಕೊಳ್ಳೋಣ ಎಂದುಕೊಂಡಿದ್ದೆ. ನಂತರ ಮನಸ್ಸು ಬದಲಾಯಿಸಿ ಬೇಡ ಎಂದು ತಿರುಪತಿಗೆ ಹೋಗಲು ಬಸ್ ಹತ್ತಿದ್ದೆ. ಮತ್ತೆ ತಿರುಪತಿಗೆ ಬೇಡ ಅಂದ್ಕೊಂಡು ಮಾರ್ಗ ಮಧ್ಯೆ ಕೆಳಗೆ ಇಳಿದೆ. ನಂತರ ಕೃಷ್ಣಗಿರಿ ಬಸ್ ಹತ್ತಿ ತಿರುವಣ್ಣಾಮಲೈಗೆ ಹೋಗಿದ್ದೆ. ಅಲ್ಲಿಂದ ಪಶ್ಚತ್ತಾಪ ಮಾಡಿಕೊಳ್ಳಲೆಂದು ರಮಣಾಶ್ರಮಕ್ಕೆ ಹೋಗಿದ್ದೆ. ಅಷ್ಟರಲ್ಲಿ ನೀವು ಬಂದು ನನ್ನನ್ನು ಬಂಧಿಸಿಬಿಟ್ರಿ ಎಂದು ನಾಗೇಶ್ ಹೇಳಿದ್ದಾನೆ.