ಸಾವಲ್ಲೂ 8 ಜನ್ರಿಗೆ ಜೀವ ಕೊಟ್ಟ ಚಂದ್ರಶೇಖರ್​: ಪತಿಯ ಅಗಲಿಕೆ ನೋವಲ್ಲೂ ಸಾರ್ಥಕತೆ ಮೆರೆದ ಗರ್ಭಿಣಿ ಪತ್ನಿ

Organ donation
Published on

ರಾಮನಗರ: ಅಪಘಾತದಲ್ಲಿ ತಲೆಗೆ ಪೆಟ್ಟಾಗಿ ಮಿದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಕುಟುಂಬಸ್ಥರು 8 ಮಂದಿಗೆ ಬದುಕು ನೀಡಿದ್ದಾರೆ.

ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಚಂದ್ರಶೇಖರ್​ ಎಂಬುವವರಿಗೆ ಭಾನುವಾರ ಸಂಜೆ ಅಪಘಾತವಾಗಿತ್ತು. ತಲೆ ಹಿಂಭಾಗಕ್ಕೆ ತೀವ್ರ ಪೆಟ್ಟು ಬಿದ್ದಿತ್ತು. ತಕ್ಷಣವೇ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸತತ 48 ಗಂಟೆಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಂದ್ರಶೇಖರ್​ ಅವರ ಮಿದಳು ಚಿಕಿತ್ಸೆಗೆ ಸ್ಪಂದಿಸದಿದ್ದಾಗ. ವೆದ್ಯರು, ಬ್ರೆನ್​ ಡೆಡ್ ​ಎಂದು ಘೋಷಿಸಿದ್ದರು. ಚಂದ್ರಶೇಖರ್​ ಬದುಕಿ ಬರಲ್ಲ ಎಂಬ ಕಹಿ ಸತ್ಯ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ನೋವಿನಲ್ಲೂ ಮಾನವೀಯತೆ ಮರೆದ ಕುಟುಂಬ, ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿತು.

ಹೃದಯ, ಎರಡು ಕಣ್ಣು, ಕಿಡ್ನಿ, ಯಕೃತ್​ ಅನ್ನು ದಾನವಾಗಿ ನೀಡಿದ್ದಾರೆ. ಆ ಮೂಲಕ 8 ಮಂದಿಯ ಬದುಕಿಗೆ ಬೆಳಕಾಗಿದ್ದಾರೆ. ಮೃತ ಚಂದ್ರಶೇಖರ್​ ಖಾಸಗಿ ಕಂಪನಿಯಲ್ಲಿ ಫೀಲ್ಡ್​ ಟೆಕ್ನಿಷಿಯನ್​ ಆಗಿ ಸೇವೆ ಸಲ್ಲಿಸುತ್ತಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು, ಪತ್ನಿ ನಾಲ್ಕು ತಿಂಗಳ ಗರ್ಭಿಣಿ. ಚಂದ್ರಶೇಖರ್​ ಅಂತ್ಯಕ್ರಿಯೆ ಗುರುವಾರ ಬಿಡದಿಯಲ್ಲಿ ನೆರವೇರಿತು. ಸಾವಿನಲ್ಲೂ ಸಾರ್ಥಕತೆ ಮೆರೆದ ಚಂದ್ರಶೇಖರ್​ಗೆ ನೂರಾರು ಮಂದಿ ಕಣ್ಣೀರ ವಿದಾಯ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net