ಕೊಳ್ಳೇಗಾಲದ ಪಾಳ್ಯ ಗ್ರಾಮದಲ್ಲಿ ನರಬಲಿ ಹಬ್ಬ: ರಾತ್ರಿ ಸತ್ತು, ಬೆಳಗ್ಗೆ ಬದುಕಿ ಬಂದವನಿಗೆ ಮೇ 18ರಂದು ತಿಥಿ!

WhatsApp Image 2022-05-10 at 1.00.45 PM
Published on

ಕೊಳ್ಳೇಗಾಲ: ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ಮೇ 9 ಮತ್ತು 10ರಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ಗ್ರಾಮ ದೇವತೆ ಶ್ರೀ ಸೀಗಮಾರಮ್ಮ ದೇವಿಗೆ ನರಬಲಿ ಹಬ್ಬ ಪವಾಡದಂತೆ ನಡೆದಿತ್ತು. ರಾತ್ರಿ ನರಬಲಿಯಾದ ವ್ಯಕ್ತಿಗೆ ಬೆಳಗ್ಗೆ ಮತ್ತೆ ಜೀವ ಬಂದ ವಿಚಾರ ಕೇಳಿ ರಾಜ್ಯದ ಜನತೆ ಆಶ್ಚರ್ಯಗೊಂಡಿದ್ದರು. ಹಬ್ಬದ ಮುಂದುವರಿದ ಭಾಗವಾಗಿ ನರಬಲಿ ಬಿದ್ದವನಿಗೆ ಮೇ 18ರಂದು ತಿಥಿ ನಡೆಯಲಿದೆ.

19 ವರ್ಷದ ಬಳಿಕ ಗ್ರಾಮದ ಎಲ್ಲ ಕೋಮಿನವರ ಒಪ್ಪಿಗೆ ಮೇರೆಗೆ ನರಬಲಿ ಹಬ್ಬ ಮೇ 18 ರಂದು ಆರಾಧನೆ(ತಿಥಿ) ಯೊಂದಿಗೆ ಸಂಪನ್ನಗೊಳ್ಳಲಿದೆ. ಬುಧವಾರ ಗ್ರಾಮದ ಭಾರಿಕೇರಿಯಲ್ಲಿರುವ ಬಲಿ ದೇವರ ಮನೆಯಲ್ಲಿದ್ದ ಬಲಿಗೆದ್ದ ಕುರಿ ಸೀಗನಾಯಕ, ಒಳಗೆರೆ ಹುಚ್ಚಮ್ಮನ ಕೇಲು ಹೊತ್ತಿದ್ದ ಜಯ ಸೀಗನಾಯಕ, ಹೋಮ ಪೂಜೆಯಲ್ಲಿ ಭಾಗವಹಿಸಿದ್ದ ಕುಮಾರ್​, ಕುಂಚಿ ಕುನ್ನಸಿಗನಾಯಕ ಹಾಗೂ ಕುನ್ನ ಸೀಗನಾಯಕ, ಹಬ್ಬ ಯಶಸ್ವಿಗೊಂಡ ಹಿನ್ನೆಲೆಯಲ್ಲಿ ಸೀಗಮಾರಮ್ಮನ ಒಕ್ಕಲಿನ ಹಿರಿಯರೊಟ್ಟಿಗೆ ಗ್ರಾಮದಲ್ಲಿರುವ ಸಾಕದೇವಮ್ಮ ಹಾಗೂ ಗುಂಡೇಗಾಲ ಗ್ರಾಮದಲ್ಲಿರುವ ಒಳಗೆರೆ ಹುಚ್ಚಮ್ಮ ದೇಗುಲಕ್ಕೆ ಮಂಗಳವಾಧ್ಯ ಸಮೇತ ತೆರಳಿ ದೇವರ ದರ್ಶನ ಪಡೆದು ವಿವಿಧ ಪೂಜೆಗಳನ್ನು ನೆರವೇರಿಸಿದರು.

ಗುಂಡೇಗಾಲ ಗ್ರಾಮದ ಒಳಗೆರೆ ಹುಚ್ಚಮ್ಮನ ದೇವಸ್ಥಾನಕ್ಕೆ ಬುಧವಾರ ಪೂಜೆ ಸಲ್ಲಿಸಲು ಪಾಳ್ಯ ಗ್ರಾಮದಿಂದ ಬಂದ ಬಲಿ ಗೆದ್ದ ಕುರಿ ಸೀಗನಾಯಕ, ಜಯ ಸೀಗನಾಯಕ ಇತರರು.
ಗುಂಡೇಗಾಲ ಗ್ರಾಮದ ಒಳಗೆರೆ ಹುಚ್ಚಮ್ಮನ ದೇವಸ್ಥಾನಕ್ಕೆ ಬುಧವಾರ ಪೂಜೆ ಸಲ್ಲಿಸಲು ಪಾಳ್ಯ ಗ್ರಾಮದಿಂದ ಬಂದ ಬಲಿ ಗೆದ್ದ ಕುರಿ ಸೀಗನಾಯಕ, ಜಯ ಸೀಗನಾಯಕ ಇತರರು.

ನರಬಲಿ ಬಿದ್ದಿದ್ದ ಕುರಿ ಸೀಗನಾಯಕ, ಕೇಲು ಹೊತ್ತವರು ಹಾಗೂ ಇತರ ಮೂವರಿಗೆ ಹಬ್ಬದ ಸಂಪ್ರದಾಯದಂತೆ ಮೇ 18ರ ರಾತ್ರಿ ಬಲಿ ದೇವರ ಮನೆಯಲ್ಲಿ ಆರಾಧನೆ(ತಿಥಿ) ಕಾರ್ಯ ನೆರವೇರಲಿದೆ. ದೇಗುಲದ ಮುಂದೆ ಅಂದು ರಾತ್ರಿ 10 ಗಂಟೆಗೆ ಆಡುಮರಿ ಬಲಿ ನೀಡಿ, ಮಾಂಸದಿಂದ ತಯಾರಿಸಿದ ಅಡುಗೆಯನ್ನು ತಡರಾತ್ರಿ ದೇವರಿಗೆ 101 ಎಡೆ ಇಟ್ಟು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಹಬ್ಬಾಚರಣೆಗೆ ವಿಧ್ಯುಕ್ತ ತೆರೆ ಬೀಳಲಿದೆ. ನಂತರ ಊರಿನ ಜನರು ಮನೆಯಲ್ಲಿ ಮೊದಲಿನಂತೆ ಮಾಂಸಾಹಾರ ಸೇವಿಸಬಹುದು. ಅಲ್ಲಿಯವರೆಗೂ ಒಗ್ಗರಣೆ ಇಲ್ಲದ ಊಟೋಪಚಾರವನ್ನೇ ಅನುಸರಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net