

ಬೀದರ್: ರಾಜ್ಯದ ಬಿಜೆಪಿ ಸರ್ಕಾರದಲ್ಲಿ 40 ಪರ್ಸೆಂಟೇಜ್ ಅಲ್ಲ, ಶೇ.65 ಸೋರಿಕೆಯಾಗುತ್ತಿದೆ. ಮಂತ್ರಿ, ಗುತ್ತಿಗೆದಾರ, ಇಂಜಿನಿಯರ್ ಅವರಿಂದ ಹಿಡಿದು ಶೇ.65 ಪರ್ಸೆಂಟ್ ಕಮಿಷನ್ ನೀಡಬೇಕು. ಇಂಥ ಸ್ಥಿತಿಗೆ ಯಾರು ಕಾರಣ? ಭ್ರಷ್ಟಾಚಾರ ಸಂಬಂಧ ಬೀದಿಗಿಳಿದು ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಇದಕ್ಕೆ ಬುನಾದಿ ಹಾಕಿದ್ದೇ ಆ ಪಕ್ಷ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಎಂದು ಕಿಡಿಕಾರಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್ಡಿಕೆ, ಹಾಲು ಉತ್ಪಾದಕರ ಸಂಘದಲ್ಲಿ ನೇಮಕಕ್ಕೆ 25-50 ಲಕ್ಷ ರೂ. ಲಂಚ ನಿಗದಿ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಇದೀಗ ಪಿಎಸ್ಐ ನೇಮಕಾತಿ ವಿಷಯ ಹೊರಬಿದ್ದಿದೆ. ಮನೆ-ಮಠ ಮಾರಿ ಲಕ್ಷಾಂತರ ರೂ. ಕೊಟ್ಟು ಸರ್ಕಾರಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಇದರಲ್ಲಿ ದೊಡ್ಡವರು ಯಾರೂ ಸಿಕ್ಕಿ ಹಾಕಿಕೊಳ್ಳಲ್ಲ. ಪಾರದರ್ಶಕ ತನಿಖೆ ನಡೆಸಿ ನಿಜವಾದ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಹಿಡಿತ ಇಲ್ಲ. ಒಂದೆಡೆ ಪಿಎಸ್ಐ ನೇಮಕ ಪರೀಕ್ಷೆಯಲ್ಲಿ ಅಕ್ರಮ, ಇನ್ನೊಂದೆಡೆ ಗುತ್ತಿಗೆದಾರರಿಂದ 40 ಪರ್ಸೆಂಟೇಜ್ ಕಮಿಷನ್. ಹೀಗೆ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಶಾಸಕ ಬಂಡೆಪ್ಪ ಖಾಶೆಂಪುರ, ಜೆಡಿಎಸ್ ಜಿಲ್ಲಾಧ್ಯ ರಮೇಶ ಪಾಟೀಲ್ ಸೋಲಪುರ ಇತರರಿದ್ದರು.
ಸರ್ಕಾರದಲ್ಲಿ ಹೇಳೋರು ಕೇಳೋರು ಯಾರೂ ಇಲ್ಲ. ಹೇಗೆ ಗೆಲ್ಲಬೇಕು? ಹೇಗೆ ಬೆಂಕಿ ಹಚ್ಚಬೇಕು ಎಂಬುದು ಮಾತ್ರ ಹೈಕಮಾಂಡ್ಗೆ ಗೊತ್ತಿರುವಂತಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸಿಗರೇ ಲೋಕಾಯುಕ್ತವನ್ನು ಕಂಪ್ಲೀಟ್ ಬಂದ್ ಮಾಡಿದವರು. ಬಿಜೆಪಿ, ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಆಕ್ರೋಶ ಹೊರಹಾಕಿದರು.