300 ಗ್ರಾಂ ಚಿನ್ನಾಭರಣವಿದ್ದ ಬ್ಯಾಗನ್ನು ವಾರಸುದಾರರಿಗೆ ಒಪ್ಪಿಸಿದ ತುಮಕೂರಿನ ಗುರುರಾಜ್​! ಕಣ್ಣೀರಿಟ್ಟು ಕೈಮುಗಿದ ಶಿವಮೊಗ್ಗದ ಮಹಿಳೆ

bag gold
Published on

ತುಮಕೂರು: ಶಿವಮೊಗ್ಗ ರೈಲ್ವೆ ನಿಲ್ದಾಣದ ಲಿಫ್ಟ್​ನಲ್ಲಿ ಸಿಕ್ಕಿದ್ದ ಬರೋಬ್ಬರಿ 300 ಗ್ರಾಂ ಚಿನ್ನಾಭರಣವಿದ್ದ ಬ್ಯಾಗ್​ ಅನ್ನು ವಾಪಸ್​ ತಲುಪಿಸಿದ ತುಮಕೂರು ತಾಲೂಕು ವಕ್ಕೋಡಿಯ ಗುರುರಾಜ್​ ಕಾಲಿಗೆ ಬಿದ್ದು ಬ್ಯಾಗ್​ನ​ ವಾರಸುದಾರರು ಕೃತಜ್ಞತೆ ಅರ್ಪಿಸಿದ್ದಾರೆ.

ಶಿವಮೊಗ್ಗದ ವಿನೋಬಾ ನಗರದ ನಿವಾಸಿ ಅರ್ಪಿತಾ ಅವರು 300 ಗ್ರಾಂ ಚಿನ್ನಾಭರಣವಿದ್ದ ಬ್ಯಾಗ್ ಅನ್ನು​ ಕಳೆದುಕೊಂಡು ಕಂಗಾಲಾಗಿದ್ದರು. ಚಿಂತಾಮಣಿಯಲ್ಲಿ ಸಂಬಂಧಿಕರ ಮದುವೆಗೆ ತೆರಳಿದ್ದ ಅರ್ಪಿತಾ ಕುಟುಂಬ, ರೈಲ್ವೆ ನಿಲ್ದಾಣದಲ್ಲಿ ಚಿನ್ನಾಭರಣವಿದ್ದ ಬ್ಯಾಗ್​ ಕಳೆದುಕೊಂಡಿತ್ತು. ತುಮಕೂರು ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿರುವ ಗುರುರಾಜ್​, ಕಾರ್ಯನಿಮಿತ್ತ ಶಿವಮೊಗ್ಗಕ್ಕೆ ತೆರಳಿದ್ದಾಗ ರೈಲ್ವೆ ನಿಲ್ದಾಣದಲ್ಲಿ ಆ ಬ್ಯಾಗ್​ ಸಿಕ್ಕಿತ್ತು. ನಿಲ್ದಾಣದಲ್ಲಿ ಬ್ಯಾಗ್​ನ ವಾರಸುದಾರರಿಗಾಗಿ ಹುಡುಕಾಡಿದರೂ ಯಾರೂ ಸಿಕ್ಕಿರಲಿಲ್ಲ. ಅಷ್ಟರಲ್ಲಿ ರೈಲು ಆಗಮಿಸಿದ ಹಿನ್ನೆಲೆಯಲ್ಲಿ ಬ್ಯಾಗನ್ನು ಮನೆಗೆ ತಂದು ಪೊಲೀಸರಿಗೆ ಗುರುರಾಜ್​ ಮಾಹಿತಿ ನೀಡಿದ್ದರು.

ಅತ್ತ ಬ್ಯಾಗ್​ ಅನ್ನು ಕಳೆದುಕೊಂಡ ಅರ್ಪಿತಾ, ಈ ಬಗ್ಗೆ ರೈಲ್ವೆ ಪೊಲೀಸ್​ ಠಾಣೆಗೆ ದೂರು ನೀಡಲು ತೆರಳಿದಾಗ ಗುರುರಾಜ್​ ಎಂಬುವರಿಗೆ ಬ್ಯಾಗ್​ ಸಿಕ್ಕಿರುವ ವಿಚಾರ ತಿಳಿದಿದೆ. ತುಮಕೂರು ತಾಲೂಕಿನ ವಕ್ಕೋಡಿಗೆ ಆಗಮಿಸಿದ ಅರ್ಪಿತಾ ಕುಟುಂಬ ಸದಸ್ಯರು ಗುರುರಾಜ್​ ದಂಪತಿಯ ಕಾಲಿಗೆ ನಮಸ್ಕರಿಸಿ ಬ್ಯಾಗ್​ ಸ್ವೀಕರಿಸಿ, ಕಣ್ಣೀರು ಸುರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net