ದೊಡ್ಡಪ್ಪನಿಂದಲೇ ಅತ್ಯಾಚಾರ, ತೀವ್ರ ರಕ್ತಸ್ರಾವವಾಗಿ 2 ವರ್ಷದ ಕಂದಮ್ಮ ಸಾವು: ಆನೇಕಲ್​ನಲ್ಲಿ ಅಮಾನುಷ ಘಟನೆ

baby jpg
Published on

ಆನೇಕಲ್​: ಕಾಮುಕನೊಬ್ಬ ತನ್ನ ತಮ್ಮನ ಎರಡು ವರ್ಷದ ಹೆಣ್ಣುಮಗುವಿನ ಮೇಲೆ ಅತ್ಯಾಚಾರ ಎಸಗಿದ್ದು, ತೀವ್ರ ರಕ್ತಸ್ರಾವವಾಗಿ ಮಗು ಮೃತಪಟ್ಟ ಅಮಾನುಷ ಘಟನೆ ಬೆಂಗಳೂರು ಸಮೀಪದಲ್ಲೇ ಸಂಭವಿಸಿದೆ.

ಆರೋಪಿ ಹೆಸರು ದೀಪು. ಅತ್ತಿಬೆಲೆ ಸಮೀಪದ ನೆರಳೂರಲ್ಲಿ ವಾಸವಿದ್ದ ದೀಪು, ಬೇರೆ ಊರಿನಲ್ಲಿ ವಾಸವಾಗಿದ್ದ ತನ್ನ ಕಿರಿಯ ಸೋದರನ ಮನೆಗೆ ಹೋಗಿದ್ದ. ತಮ್ಮನ ಮಗಳನ್ನು 10 ದಿನಗಳ ಹಿಂದೆ ಮತ್ತೊಂದು ಊರಿಗೆ ಕರೆತಂದಿದ್ದ ದೀಪು, ಮಾ.20ರಂದು ಮಗುವನ್ನು ಮರಳಿ ತನ್ನ ಸಹೋದರನಿದ್ದ ಊರಿಗೆ ಕಾರಿನಲ್ಲಿ ಕರೆದೊಯ್ಯುತ್ತಿದ್ದ. ತನ್ನೊಂದಿಗೆ ಸ್ನೇಹಿತನೊಬ್ಬನನ್ನೂ ಕರೆತಂದಿದ್ದ. ಮಾರ್ಗ ಮಧ್ಯೆ ಸ್ನೇಹಿತನನ್ನು ಕೆಳಗಿಳಿಸಿ, ಮದ್ಯ ತರುವಂತೆ ಹೇಳಿದ್ದ. ಸ್ನೇಹಿತ ಅತ್ತ ಹೋಗುತ್ತಲೇ ಕಾರಿನಲ್ಲೇ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದ. ಕಾಮುಕ ದೊಡ್ಡಪ್ಪನ ಪೈಶಾಚಿಕ ಕೃತ್ಯಕ್ಕೆ ನಲುಗಿದ್ದ ಮಗುವಿನ ಉಸಿರು ಸ್ತಬ್ಧವಾಗಿತ್ತು. ತೀವ್ರ ರಕ್ತಸ್ರಾವವಾಗಿತ್ತು.

ಅತ್ಯಾಚಾರ ಎಸಗಿದ ಬಳಿಕ ಮಗು ಸ್ತಬ್ಧವಾಗಿದ್ದನ್ನು ಕಂಡು ಆತಂಕಗೊಂಡ ದೀಪು, ಅತ್ತಿಬೆಲೆಯ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಮಗುವಿನ ತಲೆಗೆ ಗಾಯ ಆಗಿದೆ ಎಂದು ಸುಳ್ಳು ಹೇಳಿ ಚಿಕಿತ್ಸೆ ಕೊಡಿಸಲು ಯತ್ನಿಸಿದ್ದ. ಆದರೆ, ಮಗು ಮೃತಪಟ್ಟಿತ್ತು. ಅತ್ತಿಬೆಲೆ ಪೊಲೀಸ್​ ಠಾಣೆಗೆ ತಾನೇ ಹೋಗಿ, ಹಠಾತ್ತನೆ ಕಾರಿನ ಬ್ರೇಕ್​ ಹಾಕಿದ್ದರಿಂದ, ಬಿದ್ದು ತಲೆಗೆ ಗಾಯವಾಗಿ ಮಗು ಮೃತಪಟ್ಟಿದ್ದಾಗಿ ದೂರು ದಾಖಲಿಸಿದ್ದ. ಆದರೆ, ಆತನ ನಡವಳಿಕೆ ಬಗ್ಗೆ ಪೊಲೀಸರು ಅನುಮಾನಗೊಂಡಿದ್ದರು. ಆದ್ದರಿಂದ, ಮಗುವಿನ ಮರಣೋತ್ತರ ಪರೀಕ್ಷೆಗೆ ಶಿಫಾರಸು ಮಾಡಿದ್ದರು.

ಈಗ ಮಗುವಿನ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ಮಗುವನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ. ವಿಕೃತಕಾಮಿ ದೊಡ್ಡಪ್ಪ ದೀಪು ಎಂಬಾತನನ್ನು ಪೋಕ್ಸೋ ಅಡಿ ಪೊಲೀಸರು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net